ಯಾದಗಿರಿ | ರಾಮಸಮುದ್ರದಲ್ಲಿ 688 ಲಕ್ಷ ರೂ. ವೆಚ್ಚದ ಮೂರು ಕಾಮಗಾರಿ ಉದ್ಘಾಟನೆ
ಯಾದಗಿರಿ ಕ್ಷೇತ್ರದ ಸಮಗ್ರ ಅಭಿವೃದ್ಧಿಯೇ ನನ್ನ ಮೂಲಗುರಿ : ಶಾಸಕ ಚೆನ್ನಾರಡ್ಡಿ ಪಾಟೀಲ್ ತುನ್ನೂರು

ಯಾದಗಿರಿ : ನಗರ ಸೇರಿದಂತೆಯೇ ಮತಕ್ಷೇತ್ರದ ಪ್ರತಿ ಹಳ್ಳಿಗಳ ಅಭಿವೃದ್ಧಿಯೇ ನನ್ನ ಮೂಲ ಉದ್ದೇಶವಾಗಿದ್ದು, ಇನ್ನೂ ಮೂರು ವರ್ಷಗಳಲ್ಲಿ ಮಾದರಿ ಕ್ಷೇತ್ರವನ್ನಾಗಿ ಮಾಡುವ ಮೂಲಕ ಮತದಾರರ ಋಣ ತೀರಿಸುವ ಕೆಲಸ ಮಾಡುವೆ ಎಂದು ಶಾಸಕ ಚೆನ್ನಾರಡ್ಡಿ ಪಾಟೀಲ್ ತುನ್ನೂರು ಭರವಸೆ ನೀಡಿದರು.
ತಾಲೂಕಿನ ರಾಮಸಮುದ್ರ ಗ್ರಾಮದಲ್ಲಿ ಶುಕ್ರವಾರ ಲೋಕೋಪಯೋಗಿ ಇಲಾಖೆ ಏರ್ಪಡಿಸಿದ್ದ ಕೆಕೆಆರ್ ಡಿಬಿ 2023-24ನೇ ಸಾಲಿನ ಕೆಕೆಆರ್ ಡಿಬಿ ಮೈಕ್ರೋ ಅನುದಾನದ ಅಡಿಯಲ್ಲಿ ಒಟ್ಟು 688.01 ಲಕ್ಷ ರೂ. ವೆಚ್ಚದ ವಿವಿಧ ಕಾಮಗಾರಿಗಳನ್ನು ಉದ್ಘಾಟಿಸಿ ಮಾತನಾಡಿದರು.
ಬರುವ ದಿನಗಳಲ್ಲಿ ಕೆಕೆಆರ್ ಡಿಬಿ, ರಾಜ್ಯ ಸರ್ಕಾರದಿಂದ ಅತಿ ಹೆಚ್ಚಿನ ಅನುದಾನ ತಂದು ಅಭಿವೃದ್ಧಿ ಕೆಲಸಗಳನ್ನು ಮಾಡುವುದಾಗಿ ಹೇಳಿದ ಶಾಸಕರು, ಸಿಎಂ ಸಿದ್ದರಾಮಯ್ಯ ನೇತ್ವತೃದ ಸರ್ಕಾರ ಅನೇಕ ಹೊಸ, ಹೊಸ ಯೋಜನೆಗಳನ್ನು ಜಾರಿ ಮಾಡಿದೆ. ಪಂಚ ಗ್ಯಾರಂಟಿಗಳು ಹಳ್ಳಿಗರ ಮನಸ್ಸು ಮುಟ್ಟಿವೆ. ಜನಪರ ಸರ್ಕಾರದಿಂದ ಅಭಿವೃದ್ಧಿಯ ಹೊಳೆ ಹರಿಯಲಿದೆ ಎಂದರು.
ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಶ್ರೀಧರ್ ಮಾತನಾಡಿ, ಕಾಲಮಿತಿ ಒಳಗೆ ಗುಣ್ಣಮಟ್ಟದ ಕಾಮಗಾರಿ ಕೈಗೊಳಲು ಶಾಸಕರು ಸೂಚನೆ ನೀಡಿದ್ದಾರೆ. ಕಾಮಗಾರಿ ಗುಣಮಟ್ಟದಿಂದ ಮಾಡಲಾಗುವುದು ಎಂದರು.
ಗ್ರಾಮದ ಮುಖಂಡ ಬಸವರಾಜ ಬಾಗ್ಲಿ ಮಾತನಾಡಿ, ಸರ್ಕಾರ ಬಡ ಜನರಿಗಾಗಿ ಅನೇಕ ಜನಪರ ಯೋಜನೆ ಜಾರಿಗೆ ತರುವ ಮೂಲಕ ಬಡವರ ಪಾಲಿಗೆ ವರದಾನವಾಗಿದೆ ಎಂದರು.
ಈ ವೇಳೆ ಶಾಸಕರು ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ ಹಂತ, ಹಂತವಾಗಿ ಬಗೆ ಹರಿಸುವುದಾಗಿ ಹೇಳಿದರು.
ರಾಮಸಮುದ್ರ ಗ್ರಾಮ ಪಂಚಾಯತ್ ಅಧ್ಯಕ್ಷೆ ಆನಂದಮ್ಮ, ಕಾಂಗ್ರೆಸ್ ಹಿರಿಯ ಮುಖಂಡರೂ ಆದ ಗುತ್ತೀಗೆದಾರ ಚಿದಾನಂದ ಕಾಳೆಬೆಳಗುಂದಿ, ಸುದರ್ಶನ ನಾಯಕ, ಉಮೇಶ ಮುದ್ನಾಳ, ಲಚಮರೆಡ್ಡಿ, ಪಿಡಿಓ ರೇಣುಕಾ, ಮಲ್ಲಿಕಾರ್ಜುನ ಈಟೆ, ಮರಿಲಿಂಗಪ್ಪ, ಶಿವಲಿಂಗಪ್ಪ, ಸಿದ್ದಲಿಂಗಪ್ಪ ಗುನಕಿ, ಮಲ್ಲಿಕಾರ್ಜುನ ರಾಮಸಮುದ್ರ, ಕೇಶವ ಪವಾರ್ ಸೇರಿದಂತೆಯೇ ಇತರರಿದ್ದರು.
ಮೂರು ಕಾಮಗಾರಿ, 688 ಲಕ್ಷ ರೂ. ವೆಚ್ಚ :
ಈ ವೇಳೆ ತಾಲೂಕಿನ ಸಿಂದಗಿ-ಕೊಡಂಗಲ್ ರಾಜ್ಯ ಹೆದ್ದಾರಿ ರಸ್ತೆ 4.15 ಕೋಟಿ ರೂ. ವೆಚ್ಚದಲ್ಲಿ ಮರು ಡಾಂಬರೀಕರಣ, 2023-24ನೇ ಸಾಲಿನ ಕೆ.ಕೆ.ಆರ್.ಡಿ.ಬಿ. ಮೈಕ್ರೋ 180 ಲಕ್ಷ ರೂ. ಅನುದಾನದಲ್ಲಿ ತಾಲೂಕಿನ ಮುಂಡರಗಿ-ಅಚ್ಚೋಲ ರಸ್ತೆ ಸೇತುವೆ ನಿರ್ಮಾಣ ಹಾಗೂ 93.01ಲಕ್ಷ ರೂ. ಅನುದಾನದಲ್ಲಿ ತಾಲೂಕಿನ ಅರಿಕೇರಾ (ಕೆ) ದಿಂದ ಮೋಟಳ್ಳಿ (ಜಿ.ಮು.ರ) ರಸ್ತೆ ಸುಧಾರಣೆ ಕಾಮಗಾರಿ ಉದ್ಘಾಟಿಸಿದರು.
ಹೋರಾಟಕ್ಕೆ ಸ್ಪಂದಿಸಿ ಸಿಂದಗಿ ಮತ್ತು ಕೊಡಂಗಲ್ ರಾಜ್ಯ ಹೆದ್ದಾರಿಗೆ 1 ಕೋಟಿ 40 ಲಕ್ಷ ರೂ. ಅನುದಾನ ನೀಡಿ ಕಾಮಗಾರಿ ಆರಂಭಿಸಿದ ಹಿನ್ನಲೆಯಲ್ಲಿ ಕಾರ್ಯಕ್ರಮದಲ್ಲಿ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರ್ ಅವರಿಗೆ ಹೋರಾಟಗಾರ ಉಮೇಶ ಮುದ್ನಾಳ ವಿಶೇಷ ಸನ್ಮಾನ ಮಾಡಿದರು.







