ಯಾದಗಿರಿ | ಪೊಲೀಸ್ ಠಾಣೆಯಲ್ಲಿ ವ್ಯಕ್ತಿಯೊಬ್ಬರು ಮೃತ್ಯು ; ಎಎಸ್‌ಐ ವಿರುದ್ಧ ಹಲ್ಲೆ ಆರೋಪಿಸಿದ ಕುಟುಂಬಸ್ಥರು

ಕೊಡೇಕಲ್: ಜಮೀನು ವ್ಯಾಜ್ಯಕ್ಕೆ ಸಂಬಂಧಿಸಿದಂತೆ ನಾರಾಯಣಪುರ ಪೊಲೀಸ್ ಠಾಣೆಗೆ ವಿಚಾರಣೆಗೆ ತೆರಳಿದ್ದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ಠಾಣೆಯ ಎಎಸ್‌ಐ ಹಲ್ಲೆಯಿಂದಲೇ ಮೃತಪಟ್ಟಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಮೃತರನ್ನು ವಿಜಯಪುರ ಜಿಲ್ಲೆಯ ಹಡಗಲಿ ಗ್ರಾಮದ ರಾಜೇಸಾಬ ವಾಲಿಕಾರ (65) ಎಂದು ಗುರುತಿಸಲಾಗಿದೆ. ಜಮೀನು ವಿಚಾರವಾಗಿ ಐವರು ಅಣ್ಣತಮ್ಮಂದಿರ ನಡುವೆ ಹಲವು ದಿನಗಳಿಂದ ವ್ಯಾಜ್ಯ ನಡೆಯುತ್ತಿತ್ತು. ಈ ಕುರಿತು ಸಮಸ್ಯೆ ಬಗೆಹರಿಸುವ ಸಂಬಂಧ ಕುಟುಂಬದ ಸದಸ್ಯರು ಸೋಮವಾರ ಮಧ್ಯಾಹ್ನ ನಾರಾಯಣಪುರ ಪೊಲೀಸ್ ಠಾಣೆಗೆ ತೆರಳಿದ್ದರು.
ಈ ವೇಳೆ ಅಣ್ಣತಮ್ಮಂದಿರ ನಡುವೆ ವಾಗ್ವಾದ ಉಂಟಾಗಿದ್ದು, ಠಾಣೆಯ ಎಎಸ್‌ಐ ಅವರು ರಾಜೇಸಾಬ ಅವರಿಗೆ ಹಲ್ಲೆ ನಡೆಸಿದ್ದಾರೆ. ಅದರ ಪರಿಣಾಮವಾಗಿ ಅವರು ಅಸ್ವಸ್ಥಗೊಂಡು ಮೃತಪಟ್ಟಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಘಟನೆಯ ಬಳಿಕ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಮೃತರ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ.
ಪೊಲೀಸ್ ಠಾಣೆಗೆ ಎಸ್ಪಿ ಪೃಥ್ವಿಕ್ ಶಂಕರ್ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ನ್ಯಾಯಯುತ ತನಿಖೆಯ ಭರವಸೆಯನ್ನು ನೀಡಿದ್ದಾರೆ.






