ಯಾದಗಿರಿ | ನ್ಯಾಯಮೂರ್ತಿಗಳಿಂದ ನಿಂದನಾತ್ಮಕ ಹೇಳಿಕೆ; ಶಹಾಪುರ ವಾಲ್ಮೀಕಿ ನಾಯಕ ಸಮುದಾಯ ಆಕ್ರೋಶ

ಯಾದಗಿರಿ : ಮಹಿಳೆಯರು ಮತ್ತು ಸುರುಪುರ ಜನರ ಬಗ್ಗೆ ಅಕ್ಷೇಪಾರ್ಹ ಹೇಳಿಕೆ ನೀಡಿದ ಹೈಕೋರ್ಟ್ ನ್ಯಾಯಮೂರ್ತಿಗಳ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿ ವಾಲ್ಮೀಕಿ ನಾಯಕ ಸಮುದಾಯದ ಮುಖಂಡರು ಹಾಗೂ ಇತರ ಸಂಘಟನೆಯ ಮುಖಂಡರು ತಹಶೀಲ್ದಾರ್ ಉಮಾಕಾಂತ ಹಳ್ಳೆ ಅವರ ಮೂಲಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಮನವಿ ಸಲ್ಲಿಸಿದರು.
ಹೈಕೋರ್ಟ್ ನ್ಯಾಯಮೂರ್ತಿ ವಿ ಶ್ರೀಶಾನಂದ ನಾಯಕ ಸಮಾಜವನ್ನು ಹೀಯಾಳಿಸುವುದರ ಜತೆಗೆ ಇಂದಿಗೂ ಅನಿಷ್ಠ ಪದ್ಧತಿ ಇದೆ ಎಂದು ಹೇಳಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ. ನ್ಯಾಯಮೂರ್ತಿಗಳ ಈ ಹೇಳಿಕೆ ಜಿಲ್ಲೆಯ ನೆಮ್ಮದಿ ಕೆಡಿಸುವುದಾಗಿದೆ ಎಂದು ವಾಲ್ಮೀಕಿ ನಾಯಕ ಸಮುದಾಯ ಮರಿಯಾಪ್ಪ ಪ್ಯಾಟಿ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಿಂದನಾತ್ಮಕ ಹೇಳಿಕೆ ನೀಡಿರುವ ನ್ಯಾಯಮೂರ್ತಿಗಳ ವಿರುದ್ಧ ಕಾನೂನಾತ್ಮಕ ಕಠಿಣ ಕ್ರಮಕೈಗೊಳ್ಳಬೇಕು ಮತ್ತು ತಕ್ಷಣ ನ್ಯಾಯಮೂರ್ತಿಗಳು ತನ್ನ ಹೇಳಿಕೆಗೆ ಕ್ಷಮೆಯಾಚನೆ ಮಾಡಬೇಕೆಂದು ಈ ಸಂದರ್ಭದಲ್ಲಿ ಮುಖಂಡರು ಆಗ್ರಹಿಸಿದರು.
ವಾಲ್ಮೀಕಿ ನಾಯಕ ಸಮುದಾಯದ ಮುಂಖಡರು ಮತ್ತು ವಕೀಲರಾದ ಹನುಮೇಗೌಡ ಮರಕಲ್, ಆರ್.ಚೆನ್ನಬಸ್ಸು ವನದುರ್ಗ, ಟಿ.ನಾಗೇಂದ್ರ, ಶರಣಪ್ಪ ಪ್ಯಾಟಿ, ಅಮರೇಶ ನಾಯಕ ಇಟಗಿ, ವಿನೋದ ದೊರೆ, ನಾಗೇಂದ್ರ ಬಳಬಟ್ಟಿ, ಭೀಮಣ್ಣ ಹಳಿಸಗರ, ಯಲ್ಲಾಲಿಂಗ ಯಕ್ಷಿಂತಿ, ರೈತ ಮುಖಂಡ ಯಲ್ಲಯ್ಯ ನಾಯಕ ವನದುರ್ಗ, ಸುಭಾಸ ತಳವಾರ, ಪ್ರಗತಿಪರ ಚಿಂತಕರಾದ ಬಸವರಾಜ ಹೇರುಂಡಿ, ಹೊನ್ನಪ್ಪ ಗಂಗನಾಳ, ಮಾಳಪ್ಪ ಸಲಾದಪುರ ಭಾಗವಹಿಸಿದ್ದರು.







