Yadagiri | ಒಗ್ಗಟ್ಟಿನಿಂದ ಶ್ರಮಿಸಿದರೆ ಸಮಾಜದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ : ಶಾಸಕ ಚೆನ್ನಾರೆಡ್ಡಿ ಪಾಟೀಲ್
ವಿಶ್ವಕರ್ಮ ಜಯಂತ್ಯೋತ್ಸವ ಕಾರ್ಯಕ್ರಮ

ಯಾದಗಿರಿ: ಸಮಾಜದ ಸರ್ವಾಂಗೀಣ ಅಭಿವೃದ್ಧಿಗೆ ಪ್ರತಿಯೊಬ್ಬರೂ ಒಗ್ಗಟ್ಟಿನಿಂದ ಶ್ರಮಿಸುವುದು ಅತ್ಯಗತ್ಯ ಎಂದು ಯಾದಗಿರಿ ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರ ಹೇಳಿದರು.
ನಗರದ ಸರ್ಕಾರಿ ಪದವಿ ಮಹಾವಿದ್ಯಾಲಯದ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆ, ಶ್ರೀ ವಿಶ್ವಕರ್ಮ ಜಯಂತ್ಯೋತ್ಸವ ಸಮಿತಿ ಹಾಗೂ ವಿವಿಧ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಶ್ರೀ ವಿಶ್ವಕರ್ಮ ಜಯಂತ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿಶ್ವಕರ್ಮ ಸಮಾಜವು ಬುದ್ಧಿವಂತಿಕೆ, ದೂರದೃಷ್ಟಿ ಮತ್ತು ಅದ್ಭುತ ತಾಂತ್ರಿಕ ಕೌಶಲ್ಯ ಹೊಂದಿರುವ ಸಮುದಾಯವಾಗಿದೆ. ಶೈಕ್ಷಣಿಕ, ಆರ್ಥಿಕ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ಮತ್ತಷ್ಟು ಸಬಲವಾಗಿ ಬೆಳೆಯಬೇಕು. ಸಂಕಷ್ಟಗಳನ್ನು ಮೆಟ್ಟಿ ನಿಂತು ಒಗ್ಗಟ್ಟಿನಿಂದ ಬದುಕಲು ಮಹನೀಯರ ಜೀವನ ಚರಿತ್ರೆಗಳು ಪ್ರೇರಣೆಯಾಗುತ್ತವೆ ಎಂದು ಹೇಳಿದರು.
ಮುಖ್ಯ ಉಪನ್ಯಾಸಕರಾಗಿ ಮಾತನಾಡಿದ ಗುರಪ್ಪ ಎಂ. ಆಚಾರ್ಯ, ವಿಶ್ವಕರ್ಮ ಸಮುದಾಯ ಆರ್ಥಿಕವಾಗಿ ಹಿಂದುಳಿದಿದ್ದರೂ ಕಲೆ ಮತ್ತು ಸಂಸ್ಕೃತಿಯಲ್ಲಿ ಶ್ರೀಮಂತವಾಗಿದೆ. ಪಂಚವೃತ್ತಿಗಳನ್ನು ನಿರ್ವಹಿಸುವ ಕುಶಲಕರ್ಮಿಗಳನ್ನು ಗೌರವಿಸಿದಾಗ ಮಾತ್ರ ವಿಶ್ವಕರ್ಮ ಜಯಂತಿಗೆ ನಿಜವಾದ ಅರ್ಥ ಸಿಗುತ್ತದೆ. ಆಧುನಿಕ ತಂತ್ರಜ್ಞಾನದ ಭರದಲ್ಲಿ ಸಾಂಪ್ರದಾಯಿಕ ಕಲೆಗಳು ನಶಿಸುತ್ತಿರುವುದರಿಂದ ಅವುಗಳನ್ನು ಉಳಿಸಿ ಬೆಳೆಸುವ ಅಗತ್ಯವಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿಶ್ವಕರ್ಮ ಏಕದಂಡಗಿ ಮಠದ ಆನೆಗುಂದಿ ಸಂಸ್ಥಾನದ ಸರಸ್ವತಿ ಪೀಠಾಧೀಶರಾದ ಶ್ರೀ ರವೀಂದ್ರ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ರಮೇಶ ಕೋಲಾರ್, ಏಕದಂಡಗಿ ಮಠದ ಸ್ವಾಮಿಗಳಾದ ಕೃಷ್ಣ ಮೂರ್ತಿ , ವಿಶ್ವಕರ್ಮ ಸಮಾಜದ ಜಿಲ್ಲಾಧ್ಯಕ್ಷ ಮಹೇಶ ವಿಶ್ವಕರ್ಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಉತ್ತರದೇವಿ ಮಠಪತಿ, ಶಿವಣ್ಣ ಊನೂರ್, ದೇವಿಂದ್ರಪ್ಪ ಎಲ್ ವಡಗೇರಿ, ಹಣಮಂತ್ರಾಯ ಉಳ್ಳೆಸುಗೂರು, ಬನ್ನಪ್ಪ ಕಾಳೆಬೆಳಗುಂದಿ, ಮಲ್ಲು ವಿಶ್ವಕರ್ಮ ಕಂಬಾರ್ ಸೇರಿದಂತೆ ಸಮಾಜದ ಪ್ರಮುಖ ಮುಖಂಡರು, ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.






