ಯಾದಗಿರಿ | ಮುಖ್ಯ ಶಿಕ್ಷಕಿಗೆ ಜಾತಿ ನಿಂದನೆ ಆರೋಪ : ಗ್ರಾ.ಪಂ ಸದಸ್ಯನ ವಿರುದ್ಧ ಪ್ರಕರಣ ದಾಖಲು

ಸುರಪುರ : ತಾಲೂಕಿನ ಬಾಚಿಮಟ್ಟಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕಿ ನಿರ್ಮಲಾ ಹರೀಶ್ ಡಾಂ ಅವರಿಗೆ ಜ.26ರ ಗಣರಾಜ್ಯೋತ್ಸವ ದಿನದಂದು ಗ್ರಾಮ ಪಂಚಾಯತ್ ಸದಸ್ಯ ಬಸಣ್ಣಗೌಡ ಕೆಂಚಾರೆಡ್ಡಿ ಎನ್ನುವ ವ್ಯಕ್ತಿ ಮೊಬೈಲ್ ಕರೆ ಮಾಡಿ ಅವಾಚ್ಯ ಪದಗಳಿಂದ ನಿಂದಿಸಿದ್ದಾನೆ, ಅಲ್ಲದೇ ಜಾತಿ ನಿಂದನೆ ಮಾಡಿದ್ದಾನೆ ಎನ್ನುವ ಆರೋಪದ ಮೇಲೆ ಸುರಪುರ ಪೊಲೀಸ್ ಠಾಣೆಗೆ ಶಿಕ್ಷಕಿ ದೂರು ನೀಡಿದ್ದು, ಜಾತಿ ನಿಂದನೆ ಪ್ರಕರಣ ದಾಖಲಾಗಿದೆ.
ಬಸಣ್ಣಗೌಡ ಕೆಂಚಾರೆಡ್ಡಿ ಮಾತನಾಡಿದ್ದಾನೆ ಎನ್ನುವ ಆಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಶಿಕ್ಷಕಿ ನಿರ್ಮಲಾ ಹರೀಶ್ ಡಾಂ ಅವರು ದೂರು ನೀಡಿದ್ದಾರೆ.
ಸರಕಾರ ನಿಯಮಗಳನ್ನು ಪಾಲಿಸಿ ಜ.26 ರಂದು 76ನೇ ಗಣರಾಜ್ಯೋತ್ಸವ ದಿನಾಚರಣೆ ಮಾಡಲಾಗಿದೆ. ಆದರೆ ವೇದಿಕೆಯ ಮೇಲೆ ಗ್ರಾಮದ ಪ್ರಮುಖ ಮುಖಂಡರ ಜೊತೆಗೆ ದಲಿತ ಸಮಾಜದ ಕೆಲವು ಮುಖಂಡರನ್ನು ವೇದಿಕೆ ಮೇಲೆ ಕೂರಿಸಿ ಕಾರ್ಯಕ್ರಮ ಮಾಡಿದ್ದೀರಿ ಎಂದು ಮೇಲ್ಜಾತಿಯ ವ್ಯಕ್ತಿಯೊಬ್ಬರು ನನಗೆ ಅವಾಚ್ಯ ಶಬ್ದಗಳಿಂದ ಬೈದು, ಜಾತಿನಿಂದನೆ ಮತ್ತು ಜೀವಬೆದರಿಕೆ ಹಾಕಿದಲ್ಲದೆ ನನಗೆ ಅವಮಾನಿಸಿದ್ದಾರೆ. ನನ್ನ ಕುಟುಂಬಕ್ಕೆ ರಕ್ಷಣೆ ನೀಡಿ ಎಂದು ಸುರಪುರ ಪೋಲಿಸ್ ಠಾಣೆಯಲ್ಲಿ ದೂರು ನೀಡಿದ್ದೇನೆ.
-ಪ್ರಭಾರಿ ಮುಖ್ಯ ಶಿಕ್ಷಕಿ ನಿರ್ಮಲಾ







