Yadagiri | ವಿಬಿ-ಜಿ ರಾಮ್ ಜಿ ಯೋಜನೆಯಡಿ ಕೂಲಿಕಾರರಿಂದ ಹಣ ವಸೂಲಿ ಆರೋಪ : ತನಿಖೆಗೆ ಕರವೇ ಆಗ್ರಹ

ಯಾದಗಿರಿ: ಹುಣಸಗಿ ತಾಲೂಕಿನ ಬರದೇವನಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿಬಿ-ಜಿ ರಾಮ್ ಜಿ ಯೋಜನೆಯಡಿ ನಡೆಯುತ್ತಿರುವ 100 ದಿನಗಳ ಉದ್ಯೋಗ ಕಾಮಗಾರಿಯಲ್ಲಿ ಕೂಲಿಕಾರರಿಂದ ತಲಾ 100 ರೂ. ವಸೂಲಿ ಮಾಡಲಾಗುತ್ತಿದೆ ಎಂದು ಆರೋಪಿಸಿ, ಸಂಬಂಧಪಟ್ಟ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಓ) ಹಾಗೂ ಸಿಬ್ಬಂದಿಗಳ ವಿರುದ್ಧ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಸಂಘಟಕರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.
ವಿಬಿ-ಜಿ ರಾಮ್ ಜಿ ಯೋಜನೆಯಡಿ ಕೆಲಸ ಮಾಡುವ ಪ್ರತಿಯೊಬ್ಬ ಕೂಲಿಕಾರರಿಂದ ಸಿಬ್ಬಂದಿಗಳು 100 ವಸೂಲಿ ರೂ. ಮಾಡುತ್ತಿದ್ದಾರೆ. ಈಗಾಗಲೇ ಬಡ ಕೂಲಿಕಾರರು ಸಂಕಷ್ಟದಲ್ಲಿದ್ದು, ಇಂತಹ ವಸೂಲಿ ಅವರಿಗೆ ಮತ್ತಷ್ಟು ಹೊರೆಯಾಗುತ್ತಿದೆ ಎಂದು ಮುಖಂಡರು ಆರೋಪಿಸಿದ್ದಾರೆ.
ಈ ಕುರಿತು ಗ್ರಾಮ ಪಂಚಾಯಿತಿ ಸಿಬ್ಬಂದಿ ಹಾಗೂ ಅಧಿಕಾರಿಗಳನ್ನು ಪ್ರಶ್ನಿಸಿದಾಗ ಯಾವುದೇ ಸ್ಪಷ್ಟ ಉತ್ತರ ನೀಡದೆ ಮೌನ ವಹಿಸುತ್ತಿದ್ದಾರೆ. ಕೂಲಿಕಾರರ ಹಿತ ಕಾಪಾಡಬೇಕಾದ ಗ್ರಾಮ ಪಂಚಾಯಿತಿಯವರೇ ಹಣ ವಸೂಲಿಗೆ ಇಳಿದಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಕರವೇ ಆರೋಪಿಸಿದೆ.
ಸ್ಥಳೀಯ ಮಟ್ಟದಲ್ಲಿ ಸಮಗ್ರ ಪರಿಶೀಲನೆ ನಡೆಸಿ, ಆರೋಪ ಸತ್ಯವಾಗಿದ್ದರೆ ಸಂಬಂಧಪಟ್ಟ ಪಿಡಿಓ ಹಾಗೂ ಸಿಬ್ಬಂದಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ಕರವೇ ಅಧ್ಯಕ್ಷ ಹಣಮಗೌಡ ಮಾಲಿಪಾಟೀಲ ಹಾಗೂ ಉಪಾಧ್ಯಕ್ಷ ಬಸವರಾಜ ಕೊಂಡಗೂಳಿ ಒತ್ತಾಯಿಸಿದ್ದಾರೆ.
ಮನವಿ ಸಲ್ಲಿಸುವ ಸಂದರ್ಭದಲ್ಲಿ ತಾಲೂಕು ಕರವೇ ಗೌರವಾಧ್ಯಕ್ಷ ಹುಲಗಪ್ಪ ಪಾಳೇಗಾರ್, ತಾಲೂಕು ಅಧ್ಯಕ್ಷ ಬಸವರಾಜ ಚನ್ನೂರ, ವಲಯ ಘಟಕದ ಅಧ್ಯಕ್ಷ ಹಣಮಗೌಡ ಮಾಲಿಪಾಟೀಲ, ಬಸವರಾಜ ಕೊಂಡಗೂಳಿ ಸೇರಿದಂತೆ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.






