ಯಾದಗಿರಿ | ಬಜೆಟ್‌ನಲ್ಲಿ ನೂತನ ಜಿಲ್ಲೆಯ ಮೂಲಭೂತ ಸೌಕರ್ಯಕ್ಕೆ ಅನುದಾನ ಪ್ರಕಟಿಸಿ : ಭೀಮುನಾಯಕ ಒತ್ತಾಯ

ಯಾದಗಿರಿ : ಪ್ರಸಕ್ತ ಬಜೆಟ್ ನಲ್ಲಿ ರಾಜ್ಯ ಸರ್ಕಾರ ನೂತನ ಜಿಲ್ಲೆಯ ಮೂಲಭೂತ ಬೇಡಿಕೆಗಳನ್ನು ಆದ್ಯತೆಯ ಮೇರೆಗೆ ಪರಿಗಣಿಸಿ ಅನುದಾನ ಒದಗಿಸಬೇಕು. ಈ ನಿಟ್ಟಿನಲ್ಲಿ ಜಿಲ್ಲೆಯ ಶಾಸಕರು ಸಚಿವರು ಕೆಲಸ ಮಾಡಿಸಬೇಕು. ಮುಖ್ಯಮಂತ್ರಿಗಳ ಗಮನಕ್ಕೆ ತಂದು ಬೇಡಿಕೆಗಳು ಈಡೇರಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಟಿಎನ್. ಭೀಮುನಾಯಕ ಒತ್ತಾಯಿಸಿದರು.
ಈ ಕುರಿತು ಹೇಳಿಕೆ ನೀಡಿರುವ ಅವರು, ಜಿಲ್ಲೆಯಾದ ನಂತರ ಇದುವರೆಗೆ ಇಲ್ಲಿನ ಮೂಲಭೂತ ಸೌಕರ್ಯಗಳ ಪೂರೈಕೆಗೆ ಆದ್ಯತೆ ನೀಡಿಲ್ಲ. ವಿಶೇಷವಾಗಿ ಶಿಕ್ಷಣ ಹಾಗೂ ಆರೋಗ್ಯಕ್ಷೇತ್ರಗಳಲ್ಲಿನ ಸೌಕರ್ಯಗಳನ್ನು ಒದಗಿಸಲು ಮುಂದಾಗಿಲ್ಲ. 15 ವರ್ಷಗಳ ತರುವಾಯ ಒಂದು ಮೆಡಿಕಲ್ ಕಾಲೇಜು ಮಾಡಿದ್ದು ಬಿಟ್ಟರೆ ಬಹುದಿನಗಳ ಬೇಡಿಕೆಯಾದ ಒಂದು ಎಂಜಿನಿಯರಿಂಗ್ ಕಾಲೇಜು ಮಂಜುರು ಮಾಡಬೇಕು, ಒಂದು ಕೌಶಲ್ಯಾಭಿವೃದ್ಧಿ ವಿಶ್ವವಿದ್ಯಾಲಯವನ್ನು ಬಜೆಟ್ ನಲ್ಲಿ ಘೋಷಣೆ ಮಾಡಬೇಕು.
ಇನ್ನು ಕಳೆದ 6 ವರ್ಷಗಳ ಹಿಂದೆ ತಾಲ್ಲೂಕುಗಳು ಘೋಷಣೆಯಾದ ನಂತರ ಇದುವರೆಗೆ ಅಗತ್ಯ ಮೂಲ ಸೌಕರ್ಯಗಳು ಒದಗಿಸಲು ಇನ್ನು ಮೀನ ಮೇಷ ಎಣಿಸುತ್ತಿರುವುದು ಬಿಡಬೇಕು. ಪ್ರಸಕ್ತ ಬಜೆಟ್ ನಲ್ಲಿ ಸಮರ್ಪಕ ಅನುದಾನ ಒದಗಿಸಿ ತಾಲ್ಲೂಕುಗಳ ಆಡಳಿತ ಕಚೇರಿಗಳು, ಮಿನಿವಿಧಾನಸೌಧಗಳನ್ನು ನಿರ್ಮಿಸಬೇಕು ಪೂರ್ಣ ಪ್ರಮಾಣದ ಸಿಬ್ಬಂದಿ ಒದಗಿಸಬೇಕು
ಇನ್ನು ಜಿಲ್ಲೆಯ ವಡಗೇರಿ, ದೋರನಳ್ಳಿ ಸೈದಾಪುರಗಳಲ್ಲಿ ಗ್ರಾಮ ಪಂಚಾಯಿತಿಗಳನ್ನು ಪಟ್ಟಣ ಪಂಚಾಯಿತಿಗಳನ್ನಾಗಿ ಮೇಲ್ದರ್ಜೆಗೇರಿಸಲು ಅನುದಾನ ನಿಗದಿ ಮಾಡಬೇಕು. ಕಡೆಚೂರು ಬಾಡಿಯಾಲ್ ಕೈಗಾರಿಕಾ ಪ್ರದೇಶದಲ್ಲಿ ವಿಷಪೂರಿತ ಕಾರ್ಖಾನೆಗಳಿಂದ ಸುತ್ತಮುತ್ತಲ ಹತ್ತಾರು ಹಳ್ಳಿಗರ ಬದುಕು ಬರ್ ಬಾದ್ ಆಗಿದೆ. ಕೂಡಲೇ ವಿಷಪೂರಿತ ಔಷಧಿಯ ಕಾರ್ಖಾನೆಗಳ ಅನುಮತಿ ರದ್ದುಪಡಿಸಿ ಇವುಗಳ ಬದಲಿಗೆ ಉತ್ಪಾದನಾ ಆಧಾರಿತ ಗಾರ್ಮೆಂಟ್ ಸೇರಿದಂತೆ ಕೈಗಾರಿಕೆಗಳನ್ನು ನೀಡಿ ಈ ಭಾಗದಲ್ಲಿ ಉದ್ಯೋಗ ಸೃಷ್ಟಿ ಮಾಡುವುದಲ್ಲದೇ ಆರ್ಥಿಕತೆ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಬೇಕು.
ಮಹಾತ್ವಾಕಾಂಕ್ಷೆ ಜಿಲ್ಲೆಯ ಯೋಜನೆಯಡಿ ಜಿಲ್ಲೆಯಲ್ಲಿ ಇರುವ ಎರಡು ನದಿಗಳಿಗೆ ಬ್ರಿಜ್ ಕಂ ಬ್ಯಾರೇಜ್ ಮಾಡಬೇಕು ಮತ್ತು ಅವುಗಳಿಂದ ಏತನೀರಾವರಿ ಮಾಡುವಂತೆ ಯೋಜನೆ ರೂಪಿಸಬೇಕು. ಕೊಳ್ಳೂರು ಬ್ರಿಜ್ ಅನ್ನು ಎತ್ತರಿಸುವುದರ ಜೊತೆಗೆ ಬ್ರಿಜ್ ಕಂ ಬ್ಯಾರೇಜ್ ಮಾಡಿ ಏತನೀರಾವರಿ ಸೌಲಭ್ಯ ಒದಗಿಸುವ ಯೋಜನೆ ರೂಪಿಸಬೇಕು. ನಗರದ ನಾಲ್ಕು ದಿಕ್ಕುಗಳಿಗೆ ಸರ್ಕಾರಿ ಕಚೇರಿಗಳನ್ನು ಸಮಪ್ರಮಾಣದಲ್ಲಿ ಬೆಳೆಸುವಂತೆ ಕ್ರಮ ಕೈಗೊಳ್ಳಬೇಕು. ವಿಶೇಷ ಪ್ಯಾಕೇಜ್ ನವನಗರ ನಿರ್ಮಾಣ ಮಾಡಬೇಕು.
ಕಲಬುರಗಿ ಸಂಪುಟದಲ್ಲಿ ಘೋಷಣೆ ಮಾಡಿದ 371ಜೆ ಅನುಷ್ಟಾನದ ಪ್ರತ್ಯೇಕ ಸಚಿವಾಲಯ ಇನ್ನು ಕಾರ್ಯರೂಪಕ್ಕೆ ಬಂದಿಲ್ಲ. ಇದನ್ನು ಕಾರ್ಯರೂಪಕ್ಕೆ ತರಲು ಅನುದಾನ ಬಿಡುಗಡೆ ಮಾಡಬೇಕು. ಕಚೇರಿ ಕಾರ್ಯಾರಂಭ ಮಾಡಬೇಕು.
371ಜೆ ಎಲ್ಲ ಇಲಾಖೆಗಳಲ್ಲಿ ಸಂಪೂರ್ಣ ಅನುಷ್ಠಾನ ಗೊಳಿಸಲು ಕ್ರಮ ವಹಿಸಬೇಕು. ಕೆಕೆಆರ್‌ಡಿಬಿಯನ್ನು ಶಾಸಕರ ಅಭಿವೃದ್ಧಿ ಮಂಡಳಿಗೆ ಬದಲಿಗೆ ಜನರ ಅಭಿವೃದ್ಧಿ ಮಂಡಳಿಯಾಗಿಸಬೇಕು ಎಂದು ಮಲ್ಲು ಮಾಳಿಕೇರಿ, ಸಿದ್ದು ನಾಯಕ ಹತ್ತಿಕುಣಿ, ಅಂಬ್ರೇಷ್ ಹತ್ತಿಮನಿ, ಸಂತೋಷ ನಿರ್ಮಲಕರ್, ಯಮನಯ್ಯ ಗುತ್ತೇದಾರ, ವಿಶ್ವರಾಜ ಪಾಟೀಲ್ ಹೊನಗೇರಾ ಅವರು ಒತ್ತಾಯಿಸಿದ್ದಾರೆ.







