ಯಾದಗಿರಿ | ವಕ್ಫ್ ವಿಚಾರದಲ್ಲಿ ಬಿಜೆಪಿ ಮೊಸಳೆ ಕಣ್ಣೀರು : ಸಚಿವ ಶರಣಬಸಪ್ಪ ದರ್ಶನಾಪುರ
ಯಾದಗಿರಿ : ವಕ್ಫ್ ವಿಚಾರದಲ್ಲಿ ಬಿಜೆಪಿ ಮೊಸಳೆ ಕಣ್ಣೀರು ಹಾಕುತ್ತಿದೆ ಎಂದು ಸಚಿವ ಶರಣಬಸಪ್ಪ ದರ್ಶನಾಪುರ, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ನಗರದಲ್ಲಿ ಪ್ರತಿಕ್ರಿಯಿಸಿದ ಅವರು, ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಬಹಳ ವೀಕ್ ಆಗಿದ್ದಾರೆ. ಚುನಾವಣೆ ಬಂದಾಗ ಬಿಜೆಪಿಯವರು ಹಿಂದೂ ಹಿಂದೂ ಎನ್ನುತ್ತಾರೆ. ಆದರೆ ಅವರು ನುಡಿದಂತೆ ನಡೆಯುವುದಿಲ್ಲ. ಬಿಜೆಪಿ ಸರಕಾರದ ಅವಧಿಯಲ್ಲಿ ವಕ್ಫ್ ಎಂದು ನಮೂದಾಗಿದೆ, ಇದೀಗ ಅದನ್ನೇ ಮುಂದಿಟ್ಟುಕೊಂಡು ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ಬಸವಣ್ಣನವರ ಬಗ್ಗೆ ಯತ್ನಾಳ್ ಅವಹೇಳನ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಮಹಾಪುರುಷರ ಬಗ್ಗೆ ಹಾಗೆ ಮಾತನಾಡಬಾರದು. ಯತ್ನಾಳ್ ಏನು ಮಾತನಾಡಿದ್ದಾರೆ ಅವರನ್ನೇ ಕೇಳಬೇಕು ಎಂದು ಹೇಳಿದರು.
ಉಪಚುನಾವಣೆಯಲ್ಲಿ ಎನ್‌ಡಿಎ ಪಕ್ಷದವರು ಹಣದ ಹೊಳೆ ಹರಿಸಿದ್ದರು, ಆದರೆ ಇಬ್ಬರು ಸಿಎಂ ಮಕ್ಕಳನ್ನು ಮತದಾರರು ಸೋಲಿಸಿದ್ದಾರೆ. ಬಿಜೆಪಿ ಅವರು ನುಡಿದಂತೆ ನಡೆಯುವುದಿಲ್ಲ, ಹಾಗಾಗಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿದ್ದಾರೆ.
ನುಡಿದಂತೆ ನಡೆಯುತ್ತಿರುವ ನಮ್ಮ ಕಾಂಗ್ರೆಸ್ ಸರಕಾರ, ಎಲ್ಲಾ ಸಮಾಜದ ಹಿತವನ್ನು ಕಾಪಾಡುತ್ತದೆ. ಮುಂದಿನ ದಿನಗಳಲ್ಲಿ ಗ್ಯಾರಂಟಿ ಯೋಜನೆಗಳನ್ನು ವಾಪಸ್ ಪಡೆಯುವ ಯಾವುದೇ ಪ್ರಶ್ನೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.