ಯಾದಗಿರಿ | ರಾಜ್ಯ ಸರಕಾರದ ವಿರುದ್ಧ ಬಿಜೆಪಿಯಿಂದ ಅಣಕು ಶವಯಾತ್ರೆ

ಯಾದಗಿರಿ: ರಾಜ್ಯ ಸರಕಾರ ಆರ್ಥಿಕವಾಗಿ ದಿವಾಳಿಯಾಗಿದೆ ಎಂದು ಆರೋಪಿಸಿ ಜಿಲ್ಲಾ ಬಿಜೆಪಿ ವತಿಯಿಂದ ಯಾದಗಿರಿ ನಗರದ ಶುಭಸ್ವತ ವೃತ್ತದಲ್ಲಿ ಅಣಕು ಶವಯಾತ್ರೆ ನಡೆಸಿ ರಾಜ್ಯ ಸರಕಾರದ ವಿರುದ್ಧ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನಾಕಾರರು ಸರಿಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ತಹಸೀಲ್ದಾರರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜಪ್ಪ ಗೌಡ ವಿಭೂತಿಹಳ್ಳಿ ಮಾತನಾಡಿ, ರಾಜ್ಯದ ಕಾಂಗ್ರೆಸ್ ಸರಕಾರ ಅಭಿವೃದ್ಧಿಯಲ್ಲಿ ವಿಫಲವಾಗಿದ್ದು, ಬಡವರು, ರೈತರು, ಮಹಿಳೆಯರು ಹಾಗೂ ಯುವಕರಿಗೆ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿದರು.
ಸರಕಾರ ಗರಿಷ್ಠ ಪ್ರಮಾಣದಲ್ಲಿ ಸಾಲ ಮಾಡಿದ್ದರೂ ಅಭಿವೃದ್ಧಿಗೆ ಅಗತ್ಯ ಅನುದಾನ ನೀಡುತ್ತಿಲ್ಲ ಎಂದು ದೂರಿದರು. ರಾಜ್ಯದ ಹಣಕಾಸಿನ ವಾಸ್ತವಿಕ ಸ್ಥಿತಿಯನ್ನು ಜನರ ಮುಂದಿಡಲು ಶ್ವೇತಪತ್ರ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ಬಿಜೆಪಿ ಹಿರಿಯ ಮುಖಂಡ ರಾಚಣ್ಣಗೌಡ ಮುದ್ನಾಳ ಮಾತನಾಡಿ, ರಾಜ್ಯ ಸರಕಠಾರದ ಆಡಳಿತದಲ್ಲಿ ಜನಸಾಮಾನ್ಯರ ಮೂಲಭೂತ ಸಮಸ್ಯೆಗಳಿಗೆ ಸಮರ್ಪಕ ಸ್ಪಂದನೆ ದೊರೆಯುತ್ತಿಲ್ಲ ಎಂದು ಆರೋಪಿಸಿದರು.
ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಮಹೇಶರಡ್ಡಿ ಗೌಡ ಮುದ್ನಾಳ ಮಾತನಾಡಿ, ರಾಜ್ಯದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಸಮರ್ಪಕ ಅನುದಾನ ನೀಡಲಾಗುತ್ತಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ. ಬಡವರ ಸಾಮಾಜಿಕ ಭದ್ರತಾ ಯೋಜನೆಗಳು, ವಿದ್ಯಾರ್ಥಿಗಳ ಸೌಲಭ್ಯಗಳು ಹಾಗೂ ಯುವಕರಿಗೆ ಉದ್ಯೋಗಾವಕಾಶಗಳ ವಿಚಾರದಲ್ಲಿ ಸರಕಾರ ಸ್ಪಷ್ಟ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಅಡಿವೆಪ್ಪ ಜಾಕ್, ಪ್ರಭಾವತಿ ಕಲಾಲ್, ವೆಂಕಟಪ್ಪ ಅವಂಗಾಪುರ, ನರಸಿಂಹಲು ನಿರೇಟಿ, ಬಸವರಾಜ ಸೋನದ, ಪ್ರಧಾನ ಕಾರ್ಯದರ್ಶಿಗಳಾದ ಶಿವರಾಜ್ ದೇಶಮುಖ, ಸಿದ್ದನಗೌಡ ವಡಗೇರಿ, ಗ್ರಾಮೀಣ ಮಂಡಲ ಅಧ್ಯಕ್ಷ ರಾಜಶೇಖರ್ ಕಾಡಮನೂರು, ನಗರ ಪ್ರಧಾನ ಕಾರ್ಯದರ್ಶಿಗಳಾದ ಮಲ್ಲಿಕಾರ್ಜುನ ಕಟ್ಟಿಮನಿ, ರಮೇಶ್ ದೊಡ್ಡಮನಿ ಸೇರಿದಂತೆ ಹಲವು ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.






