ಯಾದಗಿರಿ | ಜಿಲ್ಲಾ ಉಸ್ತುವಾರಿ ಸಚಿವರು ಕೇವಲ ಶಹಾಪುರ, ಯಾದಗಿರಿಗೆ ಮಾತ್ರ ಸೀಮಿತ : ಬಿಜೆಪಿ ಜಿಲ್ಲಾಧ್ಯಕ್ಷ ಆರೋಪ
ಸಚಿವ ದರ್ಶನಾಪುರ ವಿರುದ್ಧ ಬಿಜೆಪಿ ಜಿಲ್ಲಾಧ್ಯಕ್ಷ ವಿಭೂತಿಹಳ್ಳಿ ಆರೋಪ

ಯಾದಗಿರಿ : ಇಲ್ಲಿನ ಜಿಲ್ಲಾ ಉಸ್ತುವಾರಿ ಸಚಿವರು ಕೇವಲ ಶಹಾಪುರ ಮತ್ತು ಯಾದಗಿರಿಗೆ ಮಾತ್ರ ಸೀಮಿತರಾಗಿದ್ದಾರೆಂದು ಭಾರತೀಯ ಜನತಾ ಪಕ್ಷದ ನೂತನ ಜಿಲ್ಲಾಧ್ಯಕ್ಷ ಬಸವರಾಜಪ್ಪ ವಿಭೂತಿಹಳ್ಳಿ ಆರೋಪಿಸಿದ್ದಾರೆ.
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಬುಧವಾರ ಜಿಲ್ಲಾಧ್ಯಕ್ಷರಾಗಿ ಪ್ರಥಮ ಭಾರಿಗೆ ಸುದ್ಧಿಗೊಷ್ಠಿ ನಡೆಸಿ ಮಾತನಾಡಿದ ಅವರು, ಆರು ತಾಲೂಕುಗಳ ದೊಡ್ಡ ಜಿಲ್ಲೆ ಇದಾಗಿದ್ದರೂ ಸಚಿವರು, ಕೇವಲ ಒಂದೆರಡು ತಾಲೂಕಿಗಳಿಗೆ ಭೇಟಿ ನೀಡುತ್ತಾರೆಯೇ ಹೊರತು ಇಲ್ಲಿಯವರೆಗೂ ಇಡಿ ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳಿಗಾಗಲಿ, ಹೊಬಳಿ, ಹಳ್ಳಿಗಳಿಗಾಗಲಿ ಭೇಟಿ ನೀಡಿ ಜನರ ಕುಂದುಕೊರತೆ ಆಲಿಸಿಲ್ಲ, ಜಿಲ್ಲೆಯ ಅಭಿವೃದ್ಧಿಗೆ ಕೆಲಸ ಮಾಡದ ಸಚಿವರ ಹಿಂದೆ ಭ್ರಷ್ಟಾಚಾರ ಮಾಡುವ ಒಂದು ತಂಡವೇ ಇದೆ, ಅವರ ಅಣತಿಯಂತೆಯೇ ಕೆಲಸ ಮಾಡುತ್ತಿದ್ದಾರೆಂದು ಆರೋಪಿಸಿದರು.
ಬರುವ ದಿನಗಳಲ್ಲಿ ಅವರು ಮಾಡುತ್ತಿರುವ ಭ್ರಷ್ಟಾಚಾರದ ವಿರುದ್ಧ ಪಕ್ಷದಿಂದ ಹೋರಾಟ ಮಾಡಲಾಗುವುದೆಂದರು. ಮುಂಬರುವ ದಿನಗಳಲ್ಲಿ ಪಕ್ಷವನ್ನು ಬೂತ್ ಮಟ್ಟದಿಂದ ಸಂಘಟಿಸಿ, ಮುಂಬರುವ ಎಲ್ಲ ಚುನಾವಣೆಗಳಲ್ಲಿ ಗೆಲ್ಲುತ್ತೆವೆ. ಪಕ್ಷದ ಮುಖಂಡರು ಮತ್ತು ಜಿಲ್ಲೆಯ ಎಲ್ಲ ಪ್ರಮುಖರು ನನಗೆ ಈ ದೊಡ್ಡ ಹೊಣೆಗಾರಿಗೆ ನೀಡಿದ್ದಾರೆ. ನಾನು ಎಲ್ಲರ ಸಹಕಾರದಿಂದ ಕೆಲಸ ಮಾಡುವುದಾಗಿ ಹೇಳಿದರು.
ಮಾಜಿ ಅಧ್ಯಕ್ಷರಾದ ಚಂದ್ರಶೇಖರ ಪಾಟೀಲ್ ಮಾಗನೂರ, ಅಮೀನ್ ರಡ್ಡಿ, ನಗರಸಭೆ ಅಧ್ಯಕ್ಷೆ ಲಲಿತಾ ಅನಪುರ, ಗುರು ಕಾಮಾ, ದೇವೇಂದ್ರನಾಥ ನಾದ್, ಎಚ್.ಸಿ.ಪಾಟೀಲ್, ಡಾ.ಚಂದ್ರಶೇಖರ ಸುಬೇದಾರ ಇತರರಿದ್ದರು.
ಬಿಜೆಪಿ ನೂತನ ಅಧ್ಯಕ್ಷರಾಗಿ ಬಸವರಾಜಪ್ಪ ವಿಭೂತಿಹಳ್ಳಿ ಆಯ್ಕೆ :
ಜಿಲ್ಲಾ ಭಾರತೀಯ ಜನತಾ ಪಕ್ಷದ ನೂತನ ಅಧ್ಯಕ್ಷರಾಗಿ ಬಸವರಾಜಪ್ಪ ವಿಭೂತಿಹಳ್ಳಿ ಹಾಗೂ ರಾಜ್ಯ ಸಮಿತಿಗೆ ಜಿಲ್ಲಾ ಪ್ರತಿನಿಧಿಯಾಗಿ ಅಮೀನ್ ರಡ್ಡಿ ಯಾಳಗಿ ಅವರು ಆಯ್ಕೆಯಾಗಿದ್ದಾರೆ.
ಬುಧವಾರ ಪಕ್ಷದ ಜಿಲ್ಲಾ ಕಚೇರಿಯಲ್ಲಿ ಚುನಾವಣಾಧಿಕಾರಿಯಾಗಿ ಆಗಮಿಸಿದ್ದ ಮಾಜಿ ಶಾಸಕ ರಾಜಕುಮಾರ ಪಾಟೀಲ್ ಸಮ್ಮುಖದಲ್ಲಿ ಸೇರಿದ್ದ ಅಪಾರ ಮುಖಂಡರು, ಕಾರ್ಯಕರ್ತರು ಇವರ ಆಯ್ಕೆಗೆ ಸಮ್ಮತಿಸಿದಾಗ ಪಾಟೀಲ್ ಹೆಸರುಗಳನ್ನು ಘೋಷಣೆ ಮಾಡಿದರು.
ಈ ಸಂದರ್ಭದಲ್ಲಿ ರಾಜ್ಯ ಕಾರ್ಯದರ್ಶಿ ಲಲಿತಾ ಅನಂತಪುರ, ನಿಕಟ ಪೂರ್ವ ಜಿಲ್ಲಾಧ್ಯಕ್ಷ ಅಮೀನ್ ರಡ್ಡಿ, ಮಾಜಿ ಜಿಲ್ಲಾಧ್ಯಕ್ಷ ಡಾ. ಶರಣಭೂಪಾಲರಡ್ಡಿ ಮತ್ತು ಚಂದ್ರಶೇಖರ ಮಗನೂರ, ನಾಗರತ್ನ ಕುಪ್ಪಿ, ಡಾ. ಚಂದ್ರಶೇಖರ ಸುಬೇದಾರ, ದೇವೇಂದ್ರನಾಥ ನಾದ್, ಖಂಡಪ್ಪ ದಾಸನ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರು ಕಾಮಾ ಮತ್ತು ಮೆಲಪ್ಪ ಮುಳುಗಿ, ಪರುಶುರಾಮ ಕುರಕುಂದಿ,ಜಿಲ್ಲಾ ವಕ್ತಾರ ಹಣಮಂತ ಇಟಗಿ, ವೆಂಕಟರಡ್ಡಿ ಅಬ್ಬೆತುಮಕೂರು, ಎಚ್.ಸಿ.ಪಾಟೀಲ್, ನಗರ ಮಂಡಲ ಅಧ್ಯಕ್ಷ ಲಿಂಗಪ್ಪ ಹತ್ತಿಕುಣಿ, ಚನ್ನುಗೌಡ ಬಿಳ್ವಾರ, ಬಸವರಾಜಗೌಡ ಬಿಳ್ವಾರ ಇತರರಿದ್ದರು.







