ಯಾದಗಿರಿ | ಬುದ್ಧ ಈ ಜಗತ್ತಿನ ವೈದ್ಯನಿದ್ದಂತೆ : ಡಾ.ಅರುಣ ಜೋಳದಕೂಡಲಗಿ

ಸುರಪುರ : ಸಮಾಜದಲ್ಲಿನ ಎಲ್ಲ ಮೌಢ್ಯ ಕಂದಾಚಾರಗಳನ್ನು ತೊಲಗಿಸಲು ಬೌದ್ಧ ಧರ್ಮವನ್ನು ನೀಡಿರುವ ಮಹಾತ್ಮ ಗೌತಮ್ ಬುದ್ಧರು ಈ ಜಗತ್ತಿನ ವೈದ್ಯನಿದ್ದಂತೆ ಇದನ್ನು ಸ್ವತಃ ವಿಜ್ಞಾನಿ ಐನಸ್ಟಿನ್ ಹೇಳಿದ್ದಾರೆ ಎಂದು ಕಲಬುರಗಿಯ ಉಪನ್ಯಾಸಕ ಡಾ.ಅರುಣ ಜೋಳದಕೂಡಲಗಿ ಹೇಳಿದರು.
ನಗರದ ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಭಗವಾನ್ ಗೌತಮ ಬುದ್ಧರ ಜಯಂತಿಯಲ್ಲಿ ಭಾಗವಹಿಸಿ ಉಪನ್ಯಾಸ ನೀಡಿ, ಬುದ್ಧನ ಚಿಂತನೆಗಳು, ಆದರ್ಶಗಳು ಇಂದಿಗೂ ಪ್ರಸ್ತುತವಾಗಿವೆ. ಮನಸ್ಸಿನ ಒಮ್ಮೆ ಒಳಹೊಕ್ಕು ನೋಡಿದರೆ ಎಲ್ಲವೂ ಸಿಗುತ್ತದೆ. ಮನುಷ್ಯ ಆಸೆಗಳಿಗೆ ಬಲಿಯಾಗಿ ಎಲ್ಲೆಡೆಯಿಂದ ಸಂಕಷ್ಟಕ್ಕೆ ಸಿಲುಕುತ್ತಿದ್ದಾನೆ. ಬುದ್ಧ ದೇವರು ಎಲ್ಲಿಯೂ ಇಲ್ಲ ತನ್ನನ್ನು ತಾನು ಅರಿತುಕೊಂಡಲ್ಲಿ ದೇವರಾಗುತ್ತಾನೆ, ಎಲ್ಲ ಧರ್ಮಗಳಲ್ಲಿ ಒಬ್ಬೊಬ್ಬರು ತಾನೆ ದೇವರು ಎಂದಿದ್ದಾರೆ, ಏಸು ಕ್ರಿಸ್ತ,ಕೃಷ್ಣ ಹೀಗೆ ಅನೇಕರು ತಾವೆ ದೇವರೆಂದರೆ ಬುದ್ಧ ಮಾತ್ರ ನಾನೊಬ್ಬ ಸಾಮಾನ್ಯ ಮನುಷ್ಯ ಎಂದು ಹೇಳಿದ್ದಾನೆ, ಬೌದ್ಧ ಧರ್ಮವನ್ನು ಬೇರೆ ಧರ್ಮಗಳಿಗೆ ಹೋಲಿಸಲು ಸಾಧ್ಯವಿಲ್ಲ ಇದೊಂದು ಪರಿಪೂರ್ಣವಾದ ವೈಜ್ಞಾನಿಕ ಧರ್ಮವಾಗಿದೆ ಎಂದರು.
ದಲಿತ ಹಿರಿಯ ಮುಖಂಡ ಮಲ್ಲಿಕಾರ್ಜುನ ಕ್ರಾಂತಿ ಮಾತನಾಡಿ, ಧ್ಯಾನದಿಂದ ಮನಸ್ಸಿನ ಕಲ್ಮಶಗಳನ್ನು ಹೊರಹಾಕಲು ಸಾಧ್ಯವಾಗುತ್ತದೆ. ನೀನು ಕಲಿತದ್ದನ್ನು ಮತ್ತೊಬ್ಬರಿಗೆ ಕಲಿಸಿದಾಗ ಸಾರ್ಥಕ ಭಾವನೆ ಮೂಡುತ್ತದೆ. ಬಡವರು ಮತ್ತು ದೀನದಲಿತರಿಗೆ ಬುದ್ಧನ ಉಪದೇಶಗಳು, ತತ್ವ-ಚಿಂಥನೆಗಳು ಆಪ್ತವಾಗುತ್ತವೆ. ಡಾ.ಬಿ.ಆರ್.ಅಂಬೇಡ್ಕರ್ ಓದುತ್ತಿರುವಾಗಲೇ ಬುದ್ಧನ ಆದರ್ಶಗಳನ್ನು ಮೈಗೂಡಿಸಿಕೊಂಡಿದ್ದರು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ ತಹಶೀಲ್ದಾರ್ ಎಚ್.ಎ.ಸರಕಾವಸ್ ಮಾತನಾಡಿದರು.
ಕಾರ್ಯಕ್ರಮದ ಆರಂಭದಲ್ಲಿ ಗೌತಮ್ ಬುದ್ಧರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಗೌರವಿಸಲಾಯಿತು. ಉಪಾಸಕ ಮೂರ್ತಿ ಬೊಮ್ಮನಹಳ್ಳಿ ಪಂಚಶೀಲ ಪಠಣ ಮಾಡಿಸಿದರು.
ವೇದಿಕೆಯಲ್ಲಿ ತಾಪಂ ಇಓ ಬಸವರಾಜ ಸಜ್ಜನ್,ನಯೋಪ್ರಾ ಅಧ್ಯಕ್ಷ ಪ್ರಕಾಶ ಗುತ್ತೇದಾರ, ಪೌರಾಯುಕ್ತ ಜೀವನ ಕಟ್ಟಿಮನಿ ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ಉಪ ಖಜನಾಧಿಕಾರಿ ಸಣೆಕೆಪ್ಪ ಕೊಂಡಿಕಾರ,ನಗರಸಭೆ ವ್ಯವಸ್ಥಾಪಕ ಯಲ್ಲಪ್ಪ ನಾಯಕ, ಕನಕಪ್ಪ ವಾಗಣಗೇರಾ, ವೆಂಕಟೇಶಗೌಡ,ಮಹಾಂತೇಶ ಗೋನಾಲ, ದಲಿತ ಮುಖಂಡರಾದ ಮಾನಪ್ಪ ಕಟ್ಟಿಮನಿ, ಬಸವರಾಜ ದೊಡ್ಡಮನಿ, ಹಣಮಂತ ಬೊಮ್ಮನಹಳ್ಳಿ, ನಿಂಗಣ್ಣ ಗೋನಾಲ, ವೀರಭದ್ರಪ್ಪ ತಳವಾರಗೇರಾ, ಪ್ರಶಾಂತ (ಉಗ್ರಂ), ಮಲ್ಲಿಕಾರ್ಜುನ ತಳ್ಳಳ್ಳಿ, ರಾಜು ಶಖಾಪುರ,ಶಿವಶಂಕರ ಬೊಮ್ಮನಹಳ್ಳಿ ಸೇರಿದಂತೆ ಅನೇಕರಿದ್ದರು.
ಗೌತಮ್ ಬುದ್ಧ ಆಸೆಯೇ ದುಖಃಕ್ಕೆ ಮೂಲ ಎಂದು ಹೇಳಿದ್ದಾರೆ ಎಂದು ಅನೇಕರು ಹೇಳುತ್ತಾರೆ. ಆದರೆ ಗೌತಮ್ ಬುದ್ಧ ಆಸೆಯೇ ದುಖಃಕ್ಕೆ ಮೂಲ ಎಂದು ಎಲ್ಲಿಯೂ ಹೇಳಲಿಲ್ಲ, ದುರಾಸೆಯೇ ದುಖಃಕ್ಕೆ ಮೂಲ ಎಂದು ಹೇಳಿದ್ದಾರೆ. ಆಸೆಯ ಬಗ್ಗೆ ಬುದ್ಧನಿಗೆ ವಿರೋಧವಿಲ್ಲ ದುರಾಸೆಯನ್ನು ವಿರೋಧಿಸಿದ್ದರು.
- ಡಾ.ಅರುಣ ಜೋಳದಕೂಡಲಗಿ ಉಪನ್ಯಾಸಕ ಕಲಬುರಗಿ







