ಯಾದಗಿರಿ | ಕೇಂದ್ರದ ಬಜೆಟ್ ನಿರಾಶಾದಾಯಕ : ಚೆನ್ನಾರೆಡ್ಡಿ ಪಾಟೀಲ್ ತುನ್ನೂರು

ಚೆನ್ನಾರೆಡ್ಡಿ ಪಾಟೀಲ್ ತುನ್ನೂರು
ಯಾದಗಿರಿ : ಕೇಂದ್ರದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಮಂಡಿಸಿದ ಕೇಂದ್ರ ಅಯ್ಯವ್ಯಯದಲ್ಲಿ ಬಿಹಾರ ಚನಾವಣೆಯ ಪ್ರಣಾಳಿಕೆಯಂತಾಗಿದ್ದು, ಕರ್ನಾಟಕವನ್ನು ಸಂಪೂರ್ಣ ಕಡೆಗಣಿಸಲಾಗಿದೆ. ರಾಜ್ಯಕ್ಕೆ ಯಾವುದೇ ಹೊಸ ಯೋಜನೆಯನ್ನು ಅಳಡಿಸಿಕೊಂಡಿಲ್ಲ ಇದರಿಂದ ಕನ್ನಡಿಗರ ನಿರೀಕ್ಷೆಗಳು ಹುಸಿಯಾಗಿವೆ ಎಂದು ಕಾಂಗ್ರೆಸ್ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು ಅವರು ಪ್ರತಿಕ್ರಿಯಿಸಿದ್ದಾರೆ.
ಕಿಸಾನ್ ಕ್ರೆಡಿಟ್ ಕಾರ್ಡ್ ಹೊಂದಿದವರಿಗೆ ಕಿಸಾನ್ ಕ್ರೆಡಿಟ್ ಹೊಂದಿದವರಿಗೆ 3.50 ಲಕ್ಷ ವರೆಗೆ ಸಾಲ ಸೌಲಭ್ಯವನ್ನು ಒದಗಿಸುವುದಾಗಿ ಘೋಷಿಸಲಾಗಿದೆ. ಆದರೆ, ರೈತರ ಉತ್ಪಾದನೆಗೆ ಯಾವುದೇ ನಿರ್ಧಿಷ್ಟವಾದ ಯೋಜನೆಯನ್ನು ರೂಪಿಸದೇ ಇರುವುದರಿಂದ ರೈತರು ಸಾಲದ ಸುಳಿಯಲ್ಲಿ ಇರಬೇಕಾಗತ್ತದೆ. ರೈತರು ಈಗಾಗಲೇ ಸಂಕಷ್ಟದಲ್ಲಿದ್ದಾರೆ. ಬಜೆಟ್ ಕೇವಲ ರೈತರ ಗುಣಗಾನಕ್ಕೆ ಸೀಮತಿವಾಗಿದ್ದು, ಕೃಷಿ ಕ್ಷೇತ್ರದ ಕಣ್ಣಿಗೆ ಮಣ್ಣೆರಚುವ ಕಾರ್ಯವಾಗಿದೆ. ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತ್ರಿ ಕಾನೂನು ಮಾಡುವ ಬಗ್ಗೆ, ಕೃಷಿ ಸಾಲ ನೀತಿ ತಿದ್ದುಪಡಿ ಮಾಡುವ ಕುರಿತು ಯಾವುದೇ ಪ್ರಸ್ತಾಪ ಮಾಡಿಲ್ಲ. ಕೃಷಿ ಕ್ಷೇತ್ರಕ್ಕೆ ನಿರುಪಯೋಗಿ ಬಜೆಟ್ ಇದಾಗಿದೆ.
ಗ್ರಾಮೀಣ ಪ್ರದೇಶದ ಮೂಲ ಶಿಕ್ಷಣಕ್ಕೆ ಒತ್ತು ಕೊಟ್ಟಿಲ್ಲ. ಮಹಿಳಾ ಶಿಕ್ಷಣಕ್ಕೆ ಯಾವದೇ ಹೊಸ ಯೋಜನೆಯನ್ನು ರೂಪಿಸಿಲ್ಲ. ಇದರಿಂದ ಮಹಿಳಾ ಸಬಲೀಕರಣಕ್ಕೆ ಪ್ರಾತಿನಿದ್ಯ ನೀಡಿಲ್ಲ. ಬಡವರಿಗೆ ಮತ್ತು ಮಧ್ಯಮ ವರ್ಗದವರಿಗೆ ಆದಾಯ ಮೂಲ ಹೆಚ್ಚಿಸಲು ಸರಿಯಾದ ಯೋಜನೆಗಳು ರೂಪಿಸದಂತೆಯೂ ಕಾಣುತ್ತಿಲ್ಲ ಇದರಿಂದ ಬಡವರು ಬಡವರಾಗಿ ಉಳಿಯುತ್ತಾರೆ.
ದೇಶದ ಸಾಲ 200 ಲಕ್ಷ ಕೋಟಿ ರೂ. ಗಿಂತಲೂ ಹೆಚ್ಚಾಗಿರುವುದು ದೇಶದ ಪ್ರತಿ ಪ್ರಜೆಗೂ ಆತಂಕವನ್ನು ಹುಟ್ಟಿಸಿದೆ. ಒಟ್ಟಾರೆ ಬಜೆಟ್ನಲ್ಲಿ ಎನ್ಡಿಎ ಯೇತರ ರಾಜ್ಯಗಳಿಗೆ ಘೋರ ಅನ್ಯಾಯ ಮಾಡಲಾಗಿದ್ದು, ಕರ್ನಾಟಕದ ಪಾಲಿಗೆ ಬಜೆಟ್ ನೀರಸವಾಗಿದೆ ಎಂದು ಟೀಕಿಸಿದ್ದಾರೆ.
ಹಿಂದುಳಿದ ಕಲ್ಯಾಣ ಕರ್ನಾಟಕದ 7 ಜಿಲ್ಲೆಗಳ ಅಭಿವೃದ್ಧಿಗೆ 5 ಸಾವಿರ ಕೋಟಿ ರೂ. ಗಳನ್ನು ಹಂಚಿಕೆ ಮಾಡುವಂತೆ ಎಐಸಿಸಿ ವರಿಷ್ಠರಾದ ಮಲ್ಲಿಕಾರ್ಜುನ ಖರ್ಗೆ ಅವರು ಹಣಕಾಸು ಸಚಿವರಿಗೆ ಮನವಿ ಮಾಡಿದ್ದರು. ಆದರೆ ಇದಕ್ಕೆ ಸ್ಪಂಧಿಸದೆ ಹಿಂದುಳಿದ ಭಾಗವನ್ನು ಕಡೆಗಣಿಸಿದೆ ಎಂದು ಶಾಸಕರು ಕಿಡಿ ಕಾರಿದ್ದಾರೆ.







