ಯಾದಗಿರಿ | ಕೇಂದ್ರದ ಬಜೆಟ್ ನಿರಾಶಾದಾಯಕ : ರಂಗನಾಥ್ ಬಾಗಲಿ

ಯಾದಗಿರಿ : ಬಜೆಟ್ ಪೂರ್ವ ಸಭೆಯಲ್ಲಿ ನಮ್ಮ ರಾಜ್ಯ ಪ್ರಸ್ತಾಪಿಸಿದ ಬೇಡಿಕೆಗಳಲ್ಲಿ ಕೇಂದ್ರ ಸರಕಾರ ಒಂದನ್ನೂ ಕೂಡ ಈಡೇರಿಸಿಲ್ಲ. ಕನ್ನಡದ ಜನತೆಗೆ ಚೊಂಬನ್ನು ಈ ಬಜೆಟ್ ನಲ್ಲಿ ಉಡುಗೊರೆಯಾಗಿ ನೀಡಿದಂತಿದೆ, ಇದು ರಾಜ್ಯದ ಹಿತಕ್ಕೆ ವಿರುದ್ಧವಾದ ನಿರಾಶದಾಯಕ ಬಜೆಟ್ ಎಂದು ಶನಿವಾರ ಕೇಂದ್ರ ಸರಕಾರ ಮಂಡಿಸಿದ 2025ರ ಬಜಟ್ ಬಗ್ಗೆ ಮೂಲ ನಿವಾಸಿ ಅಂಬೇಡ್ಕರ್ ಸಂಘ ಜಿಲ್ಲಾ ಅಧ್ಯಕ್ಷ ರಂಗನಾಥ್ ಬಾಗಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ದೆಹಲಿಯಲ್ಲೇ ರೈತರ ಪ್ರತಿಭಟನೆ ನಡೆಯುತ್ತಿದ್ದರೂ ಕೇಂದ್ರದ ಬಜೆಟ್ MSP ಕಾಯ್ದೆ ಬಗ್ಗೆ ತುಟಿ ಬಿಚ್ಚಿಲ್ಲ. ದೇಶದ ಬೆನ್ನೆಲುಬಾಗಿರುವ ರೈತ ಬಂಧುಗಳಿಗೆ ದೊಡ್ಡ ದ್ರೋಹವನ್ನು ಕೇಂದ್ರ ಎಸಗಿದೆ. ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರದ ಸಚಿವರೆಲ್ಲರೂ ಬಾಯಿಗೆ ಬೀಗ ಹಾಕಿಕೊಂಡಿದ್ದಾರೆಯೇ? ಎಂದು ಹೇಳಿದರು.
ಅಲ್ಲದೆ, ಆಂಧ್ರ ಮತ್ತು ಬಿಹಾರ ಬಿಟ್ಟು ಎಲ್ಲಾ ರಾಜ್ಯಗಳಿಗೂ ಕೇಂದ್ರ ಸರಕಾರ ಅನ್ಯಾಯ ಮಾಡಿದೆ. ಜೆಡಿಎಸ್-ಬಿಜೆಪಿ ದೋಸ್ತಿಯಿದ್ದರೂ ರಾಜ್ಯಕ್ಕೆ ಚೊಂಬು ಸಿಕ್ಕಿದೆ. ಸಂವಿಧಾನದ ಆಶಯಗಳನ್ನು ಪಾಲಿಸುತ್ತಿರುವ ನಮ್ಮ ಕರ್ನಾಟಕದಂತಹ ರಾಜ್ಯಗಳ ವಿರುದ್ಧ ಬಿಜೆಪಿ ಸರಕಾರ ಸೇಡು ತೀರಿಸಿಕೊಳ್ಳುತ್ತಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಆದಾಯ ತೆರಿಗೆಯ ಮಿತಿ 12 ಲಕ್ಷ ರೂ.ಗಳಿಗೆ ಏರಿಸಿರುವುದನ್ನು ಕೊಂಡಾಡಲಾಗುತ್ತಿದೆ. ನಮ್ಮಲ್ಲಿ ಕಳೆದ ಹಣಕಾಸು ವರ್ಷದಲ್ಲಿ ಆದಾಯ ತೆರಿಗೆ ಪಾವತಿ ಮಾಡಿದವರು ಕೇವಲ 8.09 ಕೋಟಿ ಜನ. ಇದು ನಮ್ಮ ಒಟ್ಟು ಜನಸಂಖ್ಯೆಯ ಶೇ.6.64ರಷ್ಟಾಗತ್ತದೆ. ಅವರಲ್ಲಿ 4.90 ಕೋಟಿ ಜನ ಸೊನ್ನೆ ತೆರಿಗೆ ಪಾವತಿದಾರರು. ಆದ್ದರಿಂದ ಆದಾಯ ತೆರಿಗೆ ಮಿತಿಯ ಹೆಚ್ಚಳ ಮೇಲು ಮಧ್ಯಮ ವರ್ಗದ ಕೆಲವೇ ಕುಟುಂಬಗಳಿಗೆ ನೆರವಾಗಬಹುದೇ ವಿನಃ, ದಿನದ ಆದಾಯ 100-150 ರೂಪಾಯಿಯಷ್ಟೆ ಹೊಂದಿದ ಶೇ.70ರಷ್ಟು ಜನಸಂಖ್ಯೆಗೆ ಇದರಿಂದ ಯಾವ ಲಾಭವೂ ಇಲ್ಲ ಎಂದು ಬಾಗ್ಲಿ ವಿಶ್ಲೇಷಣೆ ಮಾಡಿದ್ದಾರೆ.
“2024-25 ರ ಪತಿಷ್ಕೃತ ಬಜೆಟ್ 47,16,000 ಕೋಟಿ ರೂ. ಆಗಿತ್ತು. 1,04,000 ಕೋಟಿ ರೂ. ತೆರಿಗೆ ಕಡಿಮೆ ಆಯ್ತು. ತೆರಿಗೆ ಅವರ ನಿರೀಕ್ಷೆಯಂತೆ ಸಂಗ್ರಹ ಆಗಿಲ್ಲ ಅಂತಲೇ ಅರ್ಥ. ಈ ಸಾಲಿನ 50,65,345 ಕೋಟಿ ಬಜೆಟ್ ಗಾತ್ರದಲ್ಲಿ ಸಾಲದ ಪ್ರಮಾಣವೇ 15,68,936 ಕೋಟಿಯಷ್ಟಿದೆ. ಇದರಲ್ಲಿ ಬಡ್ಡಿಗೆ 12,70,000 ಕೋಟಿ ಹೋಗುತ್ತಿದೆ. ದೇಶದ ಸಾಲ 202 ಲಕ್ಷ ಕೋಟಿಯಿಂದ 205 ಲಕ್ಷ ಕೋಟಿವರೆಗೂ ಆಗಿದೆ.” ಎಂದು ಬಾಗಲಿ ರಂಗನಾಥ್ ಅವರು ಹೇಳಿದ್ದಾರೆ.







