ಯಾದಗಿರಿ | ಬಾಲ್ಯ ವಿವಾಹ ಸಮಾಜದ ಕೆಟ್ಟ ಪಿಡುಗು : ನ್ಯಾ.ಮರಿಯಪ್ಪ

ಯಾದಗಿರಿ : ಬಾಲ್ಯ ವಿವಾಹ ಸಮಾಜದ ಕೆಟ್ಟ ಆಚರಣೆಯಾಗಿದೆ. ಸಮಾಜಕ್ಕೆ ಇದೊಂದು ದೊಡ್ಡ ಪಿಡುಗಾಗಿ ಇವತ್ತಿಗೂ ಕಾಡುತ್ತಿದ್ದು, ಇದರ ವಿರುದ್ಧ ಜಾಗೃತಿ ಮೂಡಿಸಿ ತಡೆಗಟ್ಟುವಂತೆ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿಗಳು ಜಿಲ್ಲಾ ಕಾನೂನು ಸೇವೆಗಳ ಪದಾಧಿಕಾರ ಮರಿಯಪ್ಪ ಹೇಳಿದ್ದಾರೆ.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಆಡಿಟೋರಿಯಂ ಹಾಲ್ ನಲ್ಲಿ ನಡೆದ ʼಬಾಲ್ಯವಿವಾಹ ಮುಕ್ತ ಭಾರತ ಅಭಿಯಾನ ಮತ್ತು ನೇರ ಪ್ರಸಾರʼ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬಾಲ್ಯ ವಿವಾಹ ಶಿಕ್ಷಾರ್ಹ ಅಪರಾಧವಾಗಿದ್ದು, ಬಾಲ್ಯ ವಿವಾಹ ತಡೆಗಟ್ಟುವಲ್ಲಿ ವಿಷೇಷಾಧಿಕಾರಿಗಳು ಜಾಗೃತಿ ವಹಿಸಬೇಕು. ಬಾಲ್ಯ ವಿವಾಹ ತಡೆಗಟ್ಟಿ ಮಕ್ಕಳ ಬಾಳನ್ನು ಬೆಳಗಬೇಕು ಎಂದು ಹೇಳಿದರು.
ಸರಕಾರ ಬಾಲ್ಯ ವಿವಾಹ ವಿರುದ್ಧ ಕಾನೂನು ಜಾರಿಗೆ ತಂದಿದ್ದು, ಅದನ್ನು ಯಾವ ರೀತಿ ಅನುಸರಿಸಿ ಬಾಲ್ಯ ವಿವಾಹ ತಡೆಗಟ್ಟಬಹುದು ಎಂಬುದರ ಬಗ್ಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ತಿಳಿದುಕೊಂಡು ಇತರರಿಗೂ ಇದರ ಬಗ್ಗೆ ಅರಿವು ಮೂಡಿಸುವಂತಹ ಕಾರ್ಯ ಮಾಡಬೇಕು ಎಂದು ತಿಳಿಸಿದರು.
ಡಾ.ಶುಭಾಷಚಂದ್ರ ಕೌಲಗಿ ಮಾತನಾಡಿ, ಪೋಷಕರಲ್ಲಿ ಹೆಚ್ಚಿನ ಅರಿವು ಮೂಡಿಸುವ ಮೂಲಕ ಬಾಲ್ಯ ವಿವಾಹ ತಡೆಗಟ್ಟಲು ಇಲಾಖೆ ಅಷ್ಟೇ ಅಲ್ಲದೇ ಎಲ್ಲರೂ ಮುಂದಾಗಬೇಕು. ಶಿಕ್ಷಣದ ಕೊರತೆಯಿಂದಾಗಿ ಇಂತಹ ಪಿಡುಗುಗಳು ಸಮಾಜದಲ್ಲಿ ಇಂದಿಗೂ ಕಾಡುತ್ತಿವೆ. ಹೆಚ್ಚಿನ ಶಿಕ್ಷಣ ಪಡೆಯುವ ಮೂಲಕ ಸಮಾಜದ ಆಗುಹೋಗುಗಳ ಬಗ್ಗೆ ಅರಿಯಬೇಕಾದಂತಹ ಅವಶ್ಯಕತೆ ಇದೆ. ಬಾಲ್ಯ ವಿವಾಹಕ್ಕೆ ಮುಂದಾಗುವವರಿಗೆ ಶಿಕ್ಷೆ ನೀಡುವುದರ ಮೂಲಕ ಬಾಲ್ಯ ವಿವಾಹ ತಡೆಗಟ್ಟಲು ಮುಂದಾಗಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳು ಧರಣೇಶ್, ಸಾರ್ವಜನಿಕ ಶಾಲಾ ಶಿಕ್ಷಣ ಇಲಾಖೆ ಹಣಮಂತ, ಸಂಯೋಜನ ನಿರ್ದೇಶಕರು ಜಿಲ್ಲಾ ಬಾಲಕಾರ್ಮಿಕ ಸಂಯೋಜನ ಸೊಸೈಟಿಯ ರಿಯಾಜ್ ಪಟೇಲ್, ಆಶಾ ಬೇಗಂ, ಗುರುಪ್ರಸಾದ್, ಸಾಬಯ್ಯ ಕಲಾಲ್ ಗೋವಿಂದ್ ರಾಥೋಡ್, ತಾಯಮ್ಮ, ಬಾಲಯ್ಯ, ಬಸವರಾಜ್, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.







