Yadagiri | ಪೌರ ಕಾರ್ಮಿಕರು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು : ಉಮೇಶ ಚವ್ಹಾಣ

ಯಾದಗಿರಿ: ನಗರದ ಸ್ವಚ್ಛತೆಗೆ ಆದ್ಯತೆ ನೀಡಿ ಮಹತ್ವದ ಹೊಣೆಗಾರಿಕೆಯನ್ನು ನಿಭಾಯಿಸುತ್ತಿರುವ ಪೌರ ಕಾರ್ಮಿಕರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಪೌರಾಯುಕ್ತ ಉಮೇಶ ಚವ್ಹಾಣ ಹೇಳಿದರು.
ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ಮಂಗಳವಾರ ಪೌರ ಕಾರ್ಮಿಕರ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪೌರ ಕಾರ್ಮಿಕರು ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅತ್ಯಂತ ಮುಖ್ಯ. ಕ್ರೀಡಾಕೂಟಗಳು ಆರೋಗ್ಯ ವೃದ್ಧಿಸುವುದರ ಜೊತೆಗೆ ಪರಸ್ಪರ ಸ್ನೇಹ, ಒಗ್ಗಟ್ಟು ಮತ್ತು ತಂಡದ ಮನೋಭಾವವನ್ನು ಬೆಳೆಸುತ್ತವೆ ಎಂದು ತಿಳಿಸಿದರು.
ಕ್ರಿಕೆಟ್ ಪಂದ್ಯಾವಳಿಯಲ್ಲಿ ನಾಲ್ಕು ತಂಡಗಳು ಭಾಗವಹಿಸಿದ್ದು, ಸ್ಪರ್ಧಾತ್ಮಕ ಮನೋಭಾವದೊಂದಿಗೆ ಆಟವಾಡಬೇಕು. ಸೋಲು-ಗೆಲುವಿಗಿಂತ ಭಾಗವಹಿಸುವುದೇ ಮುಖ್ಯ ಎಂಬ ಸಂದೇಶವನ್ನು ಅವರು ನೀಡಿದರು.
ಕ್ರೀಡಾಕೂಟದಲ್ಲಿ ಪೌರ ಕಾರ್ಮಿಕರ ತಂಡ, ನಗರಸಭೆ ಸಿಬ್ಬಂದಿ ತಂಡ, ಎಸ್‌ಐ ತಂಡ ಹಾಗೂ ನೀರು ಸರಬರಾಜು ತಂಡಗಳ ನಡುವೆ ಕ್ರಿಕೆಟ್ ಪಂದ್ಯಗಳು ನಡೆದವು.
ಈ ಸಂದರ್ಭದಲ್ಲಿ ಎಇಇಗಳಾದ ರಾಕೇಶರೆಡ್ಡಿ ಮತ್ತು ಪ್ರಶಾಂತ, ಸಿಬ್ಬಂದಿಗಳಾದ ರಮೇಶ್, ಶಂಭುಲಿಂಗಪ್ಪ, ರವಿ ದಾಸನ್, ನಾಗರಾಜ, ಶರಣಮ್ಮ, ಮಂಜುನಾಥ ಹಾಗೂ ಸಿದ್ದಾರ್ಥ ಉಪಸ್ಥಿತರಿದ್ದರು.






