ಯಾದಗಿರಿ | ಸಹಕಾರ ಬ್ಯಾಂಕ್ ಅವ್ಯವಹಾರ; ಡೆತ್‌ನೋಟ್ ಬರೆದಿಟ್ಟು ಬ್ಯಾಂಕ್ ಅಧ್ಯಕ್ಷ ಆತ್ಮಹತ್ಯೆ

ಶಹಾಪುರ: ಜಿಲ್ಲೆಯ ಶಹಾಪುರ ಪಟ್ಟಣದ ಹೇಮರೆಡ್ಡಿ ಮಲ್ಲಮ್ಮ ಸಹಕಾರ ಬ್ಯಾಂಕ್‌ನಲ್ಲಿ ಕೋಟ್ಯಾಂತರ ರೂಪಾಯಿ ಅವ್ಯವಹಾರ ಆರೋಪದ ನಡುವೆಯೇ ಬ್ಯಾಂಕ್ ಅಧ್ಯಕ್ಷ ಬಸನಗೌಡ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳವಾರ ರಾತ್ರಿ ನಡೆದಿದೆ.
ಬ್ಯಾಂಕ್‌ನ ಸುಮಾರು 16 ಕೋಟಿ ರೂಪಾಯಿ ವ್ಯವಹಾರದಲ್ಲಿ ಸುಮಾರು 13 ಕೋಟಿ ರೂಪಾಯಿ ಗೋಲ್ಮಾಲ್ ನಡೆದಿರುವ ಆರೋಪ ಕೇಳಿಬಂದಿದ್ದು, ತಮ್ಮ ಹಣವನ್ನು ಹಿಂದಿರುಗಿಸುವಂತೆ ಆಗ್ರಹಿಸಿ ಠೇವಣಿದಾರರು ಕಳೆದ ಕೆಲವು ದಿನಗಳಿಂದ ಬ್ಯಾಂಕ್ ಎದುರು ಧರಣಿ ನಡೆಸುತ್ತಿದ್ದರು. ಧರಣಿ ಆರಂಭವಾದ ಬಳಿಕ ಬಸನಗೌಡ ಪಾಟೀಲ್ ಊರು ತೊರೆದಿದ್ದು, ಮಂಗಳವಾರ ರಾತ್ರಿ ಮನೆಗೆ ಮರಳಿದ್ದರು ಎನ್ನಲಾಗಿದೆ.
ಬಸನಗೌಡ ಪಾಟೀಲ್ ಎಂಟು ಪುಟಗಳ ಡೆತ್‌ನೋಟ್ ಬರೆದಿಟ್ಟು, ಮೊಬೈಲ್‌ನಲ್ಲಿ ವಿಡಿಯೋ ಸಂದೇಶ ದಾಖಲಿಸಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ ಬಳಿಕ ಶಹಾಪುರದ ತಮ್ಮ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ.
ಈ ಮೊದಲು ಬ್ಯಾಂಕ್‌ನ ಸಿಇಒ, ಸಹಾಯಕ ವ್ಯವಸ್ಥಾಪಕ ಹಾಗೂ ಪಿಗ್ಮಿ ಸಂಗ್ರಹಕಾರನ ವಿರುದ್ಧ ಬಸನಗೌಡ ಪಾಟೀಲ್ ಶಹಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಘಟನೆ ಕುರಿತು ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಡೆತ್‌ನೋಟ್ ಹಾಗೂ ವಿಡಿಯೋ ಆಧರಿಸಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ






