ಯಾದಗಿರಿ | ವಿದ್ಯಾರ್ಥಿಗಳ ಉತ್ತಮ ಕಲಿಕೆಗೆ ಸೃಜನಶೀಲತೆ ಅತಿಮುಖ್ಯ ; ಬಿ.ಆರ್.ಪಿ.ಪ್ರಭು ಸಾಹುಕಾರ

ಗುರುಮಠಕಲ್: (ಸೈದಾಪುರ) ವಿದ್ಯಾರ್ಥಿಗಳ ಉತ್ತಮ ಕಲಿಕೆಗೆ ಸೃಜನಶೀಲತೆ ಅತಿ ಮುಖ್ಯವಾಗಿದೆ. ಇದು ಸಂತಸ ಹಾಗೂ ಆಸಕ್ತಿದಾಕವಾದ ಚಟುವಟಿಕೆ ಆಧಾರಿತ ಕಲಿಕೆಯಾಗಿದೆ ಎಂದು ಬಿಆರ್‌ಪಿ ಪ್ರಭು ಸಾಹುಕಾರ ಅಭಿಪ್ರಾಯಪಟ್ಟರು.
ಸೈದಾಪುರ ವಲಯದ ಚೇಲೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡ ಅಜಲಾಪುರ ಕ್ಲಸ್ಟರ ಮಟ್ಟದ ಎಫ್‌ಎಲ್‌ಎನ್ ಕಲಿಕಾ ಹಬ್ಬ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಗಡಿನಾಡ ಗ್ರಾಮದಲ್ಲಿ ವಿವಿಧ ಶಾಲೆಗಳಿಂದ ಆಗಮಿಸಿ ಒಂದು ಕಡೆ ಸೇರಿ ಸಂಭ್ರಮದೊಂದಿಗೆ ಪಾಲ್ಗೊಂಡು ಮಕ್ಕಳು ತಮ್ಮ ಕ್ರಿಯಾತ್ಮಕತೆಯನ್ನು ಪ್ರದರ್ಶನ ಮಾಡುವ ಉತ್ತಮ ಅವಕಾಶ ಇದಾಗಿದೆ. ಪೋಷಕರು ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ಕಳಿಸಬೇಕು. ಶಿಕ್ಷಣದಿಂದ ಮಾತ್ರ ಸಾಧನೆ ಸಾಧ್ಯವಾಗುತ್ತದೆ. ಸೃಜನಾತ್ಮಕತೆ ನಿಂತ ನೀರಲ್ಲ. ಅದು ಮಕ್ಕಳಿಂದ ಮಕ್ಕಳಿಗೆ ವಿಭಿನ್ನವಾಗಿರುತ್ತದೆ. ಕ್ರಿಯಾತ್ಮಕ ವಿದ್ಯಾರ್ಥಿಗಳಿಗೆ ಇಂತಹ ವೇದಿಕೆ ಸೃಷ್ಟಿಸಿದಾಗ ಅವರ ಧನಾತ್ಮಕ ಗುಣಧರ್ಮವನ್ನು ಹೊರಗಡೆ ತರಬಹುದು. ಶಿಕ್ಷಕರಾದವರು ತರಗತಿ ಕೋಣೆಗಳಲ್ಲಿರುವ ಮಕ್ಕಳನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸವನ್ನು ಸದಾ ಮಾಡುತ್ತಿರಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಬಸ್ಸಪ್ಪ ಅಧ್ಯಕ್ಷತೆಯನ್ನು ವಹಿಸಿದ್ದರು. ಮುಖ್ಯ ಶಿಕ್ಷಕ ಕೃಷ್ಣಾ, ಕೊಂಕಲ ವಲಯದ ಇಸಿಓ ಪ್ರಕಾಶ್ ವೀರ ಶಾಸ್ತ್ರಿ, ಅಜಲಾಪುರ ಮತ್ತು ಮಾಧ್ವಾರ ವಲಯದ ಸಿಆರ್‌ಪಿಗಳಾದ ರಾಜೇಂದ್ರ ತಮನ್, ಜೈಪಾಲ್ ರೆಡ್ಡಿ, ಯಲ್ಲಪ್ಪ ಬಾಲಚೇಡ ಶಾಲೆಯ ಶಿಕ್ಷಕ ಯಲ್ಲಪ್ಪ, ವಿವಿಧ ಶಾಲೆಗಳ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು, ಅತಿಥಿ ಶಿಕ್ಷಕರು, ಗ್ರಾಮದ ಮುಖಂಡರು, ಶಿಕ್ಷಣ ಪ್ರೇಮಿಗಳು, ಹಳೆ ವಿದ್ಯಾರ್ಥಿಗಳು ಸೇರಿದಂತೆ ಇತರರಿದ್ದರು.







