ಯಾದಗಿರಿ | ಅರ್ಥಪೂರ್ಣವಾಗಿ ಸಂತ ಶ್ರೀ ಸೇವಾಲಾಲ್ ಜಯಂತಿ ಆಚರಣೆಗೆ ನಿರ್ಧಾರ

ಯಾದಗಿರಿ : ಸಂತ ಶ್ರೀ ಸೇವಾಲಾಲ್ ಜಯಂತಿಯನ್ನು ಫೆ.15 ರಂದು ಜಿಲ್ಲಾಡಳಿತದ ವತಿಯಿಂದ ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದೆ.
ಅಪರ ಜಿಲ್ಲಾಧಿಕಾರಿ ಶರಣಬಸಪ್ಪಕೋಟೆಪ್ಪಗೊಳ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಇಂದು ನಡೆದ ಸಂತ ಸೇವಾಲಾಲ್ ಜಯಂತಿ ಆಚರಣೆ ಕುರಿತ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.
ಸಭೆಯ ಅಧ್ಯಕ್ಷತೆ ವಹಿಸಿದ್ದ ಅಪರ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೊಳ ಅವರು, ಅಂದು ಮಧ್ಯಾಹ್ನ 2 ಗಂಟೆಗೆ ನಗರದ ಸರಕಾರಿ ಪದವಿ ಮಹಾವಿದ್ಯಾಲಯ ಸಭಾಂಗಣದಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ಶಿಷ್ಠಾಚಾರದಂತೆ ಅತಿಥಿ ಗಣ್ಯರನ್ನು ಆಹ್ವಾನಿಸಲು, ವೇದಿಕೆ, ಆಹ್ವಾನ ಪತ್ರಿಕೆ ಸೇರಿದಂತೆ ಇನ್ನಿತರ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಅದರಂತೆ ಜಿಲ್ಲೆಯ ಎಲ್ಲ ಶಾಲಾ, ಕಾಲೇಜುಗಳಲ್ಲಿ, ಕಚೇರಿಗಳಲ್ಲಿ ಈ ಜಯಂತಿ ಆಚರಿಸಲು ಹಾಗೂ ತಾಲೂಕು ಮಟ್ಟದಲ್ಲಿ, ಈ ಜಯಂತಿಯನ್ನು ಆಚರಣೆಗೆ ಸಕಲ ಕ್ರಮಗಳನ್ನು ಕೈಗೊಳ್ಳಬೇಕು, ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಸೂಕ್ತ ಪೊಲೀಸ್ ಬಂದೋಬಸ್ತ ಮಾಡಲು ಹಾಗೂ ನುರಿತ ಉಪನ್ಯಾಸಕರನ್ನು ಜಿಲ್ಲಾಮಟ್ಟದಲ್ಲಿ ಕಾರ್ಯಕ್ರಮಕ್ಕೆ ಆಹ್ವಾನಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಕಾರ್ಯಕ್ರಮ ಅಚ್ಚುಕಟ್ಟಾಗಿ ಆಯೋಜಿಸಬೇಕು, ಜಿಲ್ಲೆಯ ಅಧಿಕಾರಿಗಳು, ಸಿಬ್ಬಂದಿಗಳು, ಆಯಾ ಸಮಾಜದ ಮುಖಂಡರು, ಸಂಘ ಸಂಸ್ಥೆಗಳವರು ತಪ್ಪದೇ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ಅವರು ಸಲಹೆ ನೀಡಿದರು. ಮೆರವಣಿಗೆ ಕುರಿತು ಮುಂಚಿತವಾಗಿ ಜಿಲ್ಲಾಡಳಿತದ ಗಮನಕ್ಕೆ ತಂದಿರಬೇಕು.
ಸಭೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಉತ್ತರದೇವಿ ಮಠಪತಿ, ಮನೋಹರ್ ಪವಾರ್, ಸುಭಾಷ್ ರಾಠೋಡ, ಅಮರೇಶ್ವರ ರಾಠೋಡ, ದೇವರಾಜ್ ನಾಯಕ, ಜನಾರ್ದನ ರಾಠೋಡ, ಮೇಘನಾಥ್ ಚವ್ಹಾಣ, ತೇಜು. ರಾಠೋಡ, ವಿನೋದ್ ರಾಠೋಡ, ಆನಂದ ಚವ್ಹಾಣ ಇತರರು ಉಪಸ್ಥಿತರಿದ್ದರು.







