ಯಾದಗಿರಿ | ಅತ್ಯಾಚಾರ ಆರೋಪಿಯನ್ನು ಬಂಧಿಸಲು ಆಗ್ರಹ

ಸುರಪುರ : ತಾಲೂಕಿನ ಕೆಂಭಾವಿ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮವೊಂದರಲ್ಲಿ ದಲಿತ ಮಹಿಳೆ ಮೇಲೆ ಅತ್ಯಾಚಾರವೆಸಗಿರುವ ಆರೋಪಿಯನ್ನು ಕೂಡಲೇ ಬಂಧಿಸುವಂತೆ ಭೀಮ್ ಆರ್ಮಿ ಸಂಘಟನೆಯ ತಾಲೂಕು ಅಧ್ಯಕ್ಷ ಶರಣಪ್ಪ ಎಂ,ಹೊಸಮನಿ ಆಗ್ರಹಿಸಿದರು.
ನಗರದ ಪೊಲೀಸ್ ಠಾಣೆ ಮುಂದೆ ಸಾಂಕೇತಿಕ ಪ್ರತಿಭಟನೆ ನಡೆಸಿ ಮಾತನಾಡಿದ ಅವರು, ಕೆಂಭಾವಿ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರಕ್ಕೊಳಗಾದ ಮಹಿಳೆ ಕಳೆದ ತಿಂಗಳು 20ರಂದು ಪ್ರಕರಣ ದಾಖಲಿಸಿರುತ್ತಾಳೆ, ಸುಮಾರು ಒಂದು ತಿಂಗಳು ಗತಿಸಿದರೂ ಕೂಡಾ ಆರೋಪಿ ಬಂಧಿಸದೆ ಇರುವ ಠಾಣಾಧಿಕಾರಿಗಳ ವಿಳಂಬ ಧೋರಣೆಯನ್ನು ಖಂಡಿಸುವುದಾಗಿ ತಿಳಿಸಿದರು.
ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಆರೋಪಿ ಗ್ರಾಮದಲ್ಲಿ ರಾಜಾರೋಷವಾಗಿ ತಿರುಗಾಡುತ್ತಿದ್ದು, ನೊಂದ ಮಹಿಳೆ ಕುಟುಂಬಸ್ಥರಿಗೆ ಜೀವ ಭಯವನ್ನು ಹಾಕಿರುತ್ತಾನೆ. ಕೂಡಲೆ ಆರೋಪಿಯನ್ನು ಬಂಧಿಸಿ ನೊಂದ ಕುಟುಂಬಕ್ಕೆ ರಕ್ಷಣೆ ಒದಗಿಸಬೇಕು. ಒಂದು ವೇಳೆ ವಿಳಂಬವಾದಲ್ಲಿ ತಮ್ಮ ಕಚೇರಿ ಮುಂದೆ ಹೋರಾಟ ನಡೆಸಲಾಗುವುದೆಂದು ಎಚ್ಚರಿಸಿದರು.
ನಂತರ ಪೋಲಿಸ್ ಉಪಾಧೀಕ್ಷಕರಿಗೆ ಬರೆದ ಮನವಿ ಪತ್ರವನ್ನು ಸುರಪುರ ಪೊಲೀಸ್ ಠಾಣಾ ಪಿ.ಐ ಆನಂದ ವಾಗಮೊಡೆ ಅವರ ಮೂಲಕ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ಪದಾಧಿಕಾರಿಗಳಾದ ವೇಣುಗೋಪಾಲ ದೊಡ್ಡಮನೆ ಶಖಾಪುರ್, ಹುಣಸಗಿ ತಾಲೂಕ ಅಧ್ಯಕ್ಷ ಸಿದ್ಧಾರ್ಥ, ಜೈ ಭೀಮ್ ಹೆಮನೂರು, ಹಣಮಂತ ದೊಡ್ಡಮನಿ, ಭೀಮಣ್ಣ ದೊಡ್ಡಮನಿ, ಸುರೇಶ್ ಬಿ.ಆರ್, ಬಲಭೀಮ ಕಿರದಳ್ಳಿ, ಸಂಘಟನೆಯ ಮುಖಂಡರು ಭಾಗವಹಿಸಿದ್ದರು .







