ಯಾದಗಿರಿ | ಶಾಸಕರಿಗೆ ಮಣಿಯದೇ ಕಾಮಗಾರಿಗಳನ್ನು ತಕ್ಷಣ ಆರಂಭಿಸಲು ಆಗ್ರಹ
ಲೋಕೋಪಯೋಗಿ ಇಲಾಖೆಯಿಂದ ರಸ್ತೆ ಕಾಮಗಾರಿ ತಕ್ಷಣ ಪ್ರಾರಂಭ ಮಾಡದಿದ್ದರೆ ಸೋಮವಾರ ಪ್ರತಿಭಟನೆ : ಭೀಮುನಾಯಕ ಎಚ್ಚರಿಕೆ

ಯಾದಗಿರಿ : ಮತಕ್ಷೇತ್ರದ ವ್ಯಾಪ್ತಿಯಲ್ಲಿ ಪಿಡಬ್ಲೂಡಿಯಿಂದ ಕೈಗೆತ್ತಿಕೊಂಡ ರಸ್ತೆ ಕಾಮಗಾರಿಗಳನ್ನು ಬೇರೆ ಸಂಸ್ಥೆಗಳಿಗೆ ಬದಲಿಸದೇ ಇಲಾಖೆಯಿಂದಲೇ ಗುಣಮಟ್ಟದ ಕಾಮಗಾರಿ ಮಾಡುವಂತೆ ಒತ್ತಾಯಿಸಿದರೂ ಕ್ರಮ ಕೈಗೊಳ್ಳದೇ ಇರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಕರವೇ ಜಿಲ್ಲಾಧ್ಯಕ್ಷ ಜಿಲ್ಲಾದ್ಯಕ್ಷ ಟಿ.ಎನ್.ಭೀಮುನಾಯಕ ಸೋಮವಾರದೊಳಗಾಗಿ ನಿಯಮಾನುಸಾರ ಇಲಾಖೆ ಕಾಮಗಾರಿ ಆರಂಭಿಸದಿದ್ದರೆ ಇಲಾಖೆ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಯಾದಗಿರಿ ಮತಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಲೋಕೋಪಯೋಗಿ ಇಲಾಖೆ ರಸ್ತೆ ಕಾಮಗಾರಿಗಳು ಕೆಆರ್.ಐಡಿಎಲ್. (ಭೂಸೇನೆ)ಗೆ ವಹಿಸಿಕೊಡುವಂತೆ ತಮಗೆ ಶಾಸಕರು ಬರೆದಿರುವ ಪತ್ರಕ್ಕೆ ಮಣಿದು ಇ-ಟೆಂಡರ್ ಪ್ರಕ್ರಿಯೆ ಸ್ಥಗಿತಗೊಳಿಸಿದ ಇಲಾಖೆ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಅವರು, ಯಾವುದೇ ಕಾರಣಕ್ಕೂ ಕಾಮಗಾರಿಗಳ ಅದಲು ಬದಲು ಮಾಡುವ ಕೆಲಸ ಮಾಡದೇ ತಕ್ಷಣ ಲೋಕೋಪಯೋಗಿ ಇಲಾಖೆ ಇ ಟೆಂಡರ್ ನಿಯಮಾವಳಿ ಪಾಲಿಸಿ ಅರ್ಹ ಗುತ್ತೇದಾರರಿಗೆ ಕೆಲಸ ವಹಿಸಿ ಗುಣಮಟ್ಟದ ಕಾಮಗಾರಿ ಮಾಡಬೇಕು.
ಆದರೆ ಶಾಸಕರ ಪತ್ರದ ನೆಪ ಮಾಡಿಕೊಂಡು ಇ ಟೆಂಡರ್ ಪ್ರಕ್ರಿಯೆಯನ್ನೇ ಸ್ಥಗಿತಗೊಳಿಸಿರುವುದನ್ನು ತಕ್ಷಣ ಜಿಲ್ಲಾಧಿಕಾರಿಗಳು, ಇಲಾಖೆಯ ಅಧೀಕ್ಷಕ ಅಬಿಯಂತರುಗಳು ಮುಖ್ಯ ಇಂಜಿನಿಯರುಗಳು ಪರಿಶೀಲಿಸಿ ಕೆಲಸ ಮಾಡುವಂತೆ ಇಇ ಅವರಿಗೆ ಸೂಚನೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಅಭಿವೃದ್ದಿ ಕೆಲಸದಲ್ಲಿಯೂ ಸ್ವಾರ್ಥ ಸಾಧನೆಗೆ ಮುಂದಾಗಿರುವ ಶಾಸಕರ ಕ್ರಮಕ್ಕೆ ಸೊಪ್ಪು ಹಾಕದೇ ನಿಯಮಾನುಸಾರ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕೆಂದು ಅವರು ಒತ್ತಾಯಿಸಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾಗಿ ಸ್ಥಗಿತಗೊಂಡಿರುವ ಪ್ರಕ್ರಿಯೆ ಮುಂದುವರೆಸಬೇಕು ಇಲ್ಲವಾದಲ್ಲಿ ಬರುವ ಸೋಮವಾರ ಮಾ.10 ರಂದು ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಮಲ್ಲು ಮಾಳಿಕೇರಿ, ಸಿದ್ದುನಾಯಕ ಹತ್ತಿಕುಣಿ ಅಂಬ್ರೇಶ್ ಹತ್ತಿಮನಿ, ಯಮನಯ್ಯ ಗುತ್ತೇದಾರ, ಸಂತೋಷ್ ನಿರ್ಮಲಕರ್, ವಿಶ್ವರಾಜ ಪಾಟೀಲ್ ಹೊನಗೇರಾ, ಎಚ್ಚರಿಕೆ ನೀಡಿದ್ದಾರೆ.







