ಯಾದಗಿರಿ | ಕಿರು ಸಾಲ, ಸಣ್ಣ ಆಧ್ಯಾದೇಶ ಜಿಲ್ಲೆಯಲ್ಲಿ ಅನುಷ್ಠಾನಕ್ಕೆ ಜಿಲ್ಲಾಧಿಕಾರಿ ಡಾ.ಸುಶೀಲಾ ಬಿ. ಸೂಚನೆ

ಯಾದಗಿರಿ: ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಕರ್ನಾಟಕ ಕಿರು ಸಾಲ ಮತ್ತು ಸಣ್ಣ ಆಧ್ಯಾದೇಶ 2025ಅನ್ನು ರಾಜ್ಯ ಸರ್ಕಾರ ಜಾರಿಗೆ ತಂದಿದ್ದು, ಅದನ್ನು ಜಿಲ್ಲೆಯಲ್ಲಿ ಕಟ್ಟುನಿಟ್ಟಾಗಿ ಅನುಷ್ಠಾನಗೊಳ್ಳಿಸಬೇಕೆಂದು ಜಿಲ್ಲಾಧಿಕಾರಿ ಡಾ.ಸುಶೀಲಾ ಬಿ. ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಮೈಕ್ರೋ ಫೈನಾನ್ಸ್ ಮತ್ತು ಲೇವಾದೇವಿಗಾರರಗಳ ಪ್ರಗತಿ ಪರಿಶಿಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ವ್ಯವಹರಿಸುತ್ತಿರುವ ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಕಡ್ಡಾಯವಾಗಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನೋಂದಣಿ ಮಾಡಿಸಿಕೊಳ್ಳಬೇಕು. ಸದರಿ ಸಂಸ್ಥೆಗಳು ತಾವು ವಿಧಿಸುವ ಬಡ್ಡಿದರ, ಸಾಲಗಾರರ ಮಾಹಿತಿ, ಸುಸ್ಥಿ ಸಾಲಗಳ ವಿವರ ಮುಂತಾದವುಗಳನ್ನು ಜಿಲ್ಲಾಧಿಕಾರಿಗಳಿಗೆ ನೀಡಬೇಕಾಗಿರುತ್ತದೆ ಎಂದು ಸಂಬಂದ ಪಟ್ಟವರಿಗೆ ನಿರ್ದೇಶನ ನೀಡಿದರು.
ಸಾಲ ವಸೂಲಾತಿ ಹಾಗೂ ಸಾಲ ನೀಡಿಕೆಗೆ ಇರುವ ಮಾನದಂಡಗಳ ಕುರಿತು ವಿವರಿಸಿ, ಗ್ರಾಮ ಅಥವಾ ಪಟ್ಟಣಗಳಲ್ಲಿ ಸಾಲ ವಸೂಲಾತಿಗೆ ನಿರ್ವಹಿಸಿರುವ ಅಧಿಕಾರಿಗಳ ಪಟ್ಟಿ ಹಾಗೂ ಸಾಲಗಾರರ ಹೆಸರು ಮತ್ತು ವಿಳಾಸದೊಂದಿಗೆ ಲಿಖಿತ ಮುಚ್ಚಳಿಕೆಯೊಂದಿಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ನೊಂದಣಿಯನ್ನು ಕಡ್ಡಾಯವಾಗಿ ಮಾಡಕೊಳ್ಳಬೇಕು. ಅಲ್ಲದೆ ಜಿಲ್ಲೆಯಲ್ಲಿರುವ ಮೈಕ್ರೋ ಫೈನಾನ್ಸ್ ಹಾಗೂ ನೀಡಿಕೆ ಎಜೆನ್ಸಿ ಮತ್ತು ಲೇವಾದೇವಿಗಾರರು ಬಡ್ಡಿದರದಲ್ಲಿ ಪಾರದರ್ಶಕತೆಯನ್ನು ಕಾಪಾಡಿಕೊಳ್ಳುವಂತೆ ತಿಳಿಸಿದರು. ಹಾಗೂ ಬಡ್ಡಿಯ ದರಗಳನ್ನು ತಮ್ಮ ಕಚೇರಿಯ ಸೂಚನಾ ಫಲಕದಲ್ಲಿ ಅಳವಡಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ವೇಳೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಾದ ಶ್ರೀ ಪೃಥ್ವಿ ಕ್ ಶಂಕರ ಅವರು ಮಾತನಾಡಿ, ಸಾಲ ವಸೂಲಾತಿ ವೇಳೆ ಆರ್ಬಿಐ ನಿಯಮದಂತೆ ನಡೆದುಕೊಳ್ಳಬೇಕು. ಕಾನೂನು ಬಾಹಿರವಾಗಿ ಸಾಲ ವಸೂಲಾತಿಗೆ ಮುಂದಾದರೆ ಮುಲಾಜಿಲ್ಲದೆ ಕಠಿಣ ಕ್ರಮಕೈಗೊಳ್ಳುತ್ತೇವೆ. ಸಾಲ ವಸೂಲಿ ಮಾಡುವಾಗ ನೀವು ಜನರನ್ನು ಹಿಂಸಿಸಬಾರದು ಮತ್ತು ಕಿರುಕುಳ ನೀಡಬಾರದು. ಮೈಕ್ರೋ ಫೈನಾನ್ಸ್ ಮತ್ತು ಲೇವಾದೇವಿಗಾರರಿಂದ ಆಧ್ಯಾದೇಶದ ಉಲ್ಲಂಘನೆಯಾದಲ್ಲಿ ಸಂಬಂಧ ಪಟ್ಟ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗುತ್ತದೆ ಎಂದು ಹೇಳಿದರು
ಈ ವೇಳೆ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಗಳಾದ ಲವೀಶ್ ಒರಡಿಯಾ ಅವರು ಮಾತನಾಡಿ, ಮೈಕ್ರೋ ಫೈನಾನ್ಸ್ ಮತ್ತು ಲೇವಾದೇವಿಗಾರರು ಕಡ್ಡಾಯವಾಗಿ ಆರ್.ಬಿ.ಐ ಮಾರ್ಗಸೂಚಿಗಳನ್ನು ಹಾಗೂ ಈ ಅಧ್ಯಾದೇಶದ ಕ್ರಮಗಳನ್ನು ಚಾಚು ತಪ್ಪದೆ ಪಾಲಿಸಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಇದೇ ಸಂದರ್ಭದಲ್ಲಿ ಸಹಕಾರ ಸಂಘಗಳ ಉಪ ನಿಬಂಧಕರು ಪವನ್ ಕುಮಾರ್, ಲೀಡ್ ಬ್ಯಾಂಕಿನ ಅಧಿಕಾರಿಗಳು ಸೇರಿದಂತೆ ಸುರಪೂರ ಮತ್ತು ಯಾದಗಿರಿಯ 23 ಮೈಕ್ರೋ ಫೈನಾನ್ಸ್ ಹಾಗೂ 10 ಶಾಖೆಯ ಅಧಿಕಾರಿಗಳು ಸಭೆಯಲ್ಲಿ ಇದ್ದರು.







