ಯಾದಗಿರಿ | ಶಾಸಕರ ಒತ್ತಡಕ್ಕೆ ಮಣಿಯದೇ ಲೋಕೋಪಯೋಗಿ ಇಲಾಖೆಯಿಂದಲೇ ರಸ್ತೆ ಕಾಮಗಾರಿ ನಡೆಸಿ
ಕರವೇ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ

ಯಾದಗಿರಿ : ಮತಕ್ಷೇತ್ರದ ವ್ಯಾಪ್ತಿಯಲ್ಲಿ ಪಿಡಬ್ಲೂಡಿಯಿಂದ ಕೈಗೆತ್ತಿಕೊಂಡ 8 ರಸ್ತೆ ಕಾಮಗಾರಿಗಳನ್ನು ಬೇರೆ ಸಂಸ್ಥೆಗಳಿಗೆ ಬದಲಿಸದೇ ಪಿಡಬ್ಲೂಡಿ ಇಲಾಖೆಯಿಂದಲೇ ಗುಣಮಟ್ಟದ ಕಾಮಗಾರಿ ಮಾಡಲು ಕ್ರಮ ಕೈಗೊಳ್ಳುವಂತೆ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾದ್ಯಕ್ಷ ಟಿ.ಎನ್.ಭೀಮುನಾಯಕ ಒತ್ತಾಯಿಸಿದರು.
ಈ ಕುರಿತು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ಯಾದಗಿರಿ ಮತಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಲೋಕೋಪಯೋಗಿ ಇಲಾಖೆ 8 ರಸ್ತೆ ಕಾಮಗಾರಿಗಳು ಕೆಆರ್.ಐಡಿಎಲ್. (ಭೂಸೇನೆ)ಗೆ ವಹಿಸಿಕೊಡುವಂತೆ ತಮಗೆ ಶಾಸಕ ಚೆನ್ನಾರಡ್ಡಿ ಪಾಟೀಲ್ ತುನ್ನೂರು ಅವರು ಬರೆದಿರುವ ಪತ್ರಕ್ಕೆ ಮಣಿದು ಕಾಮಗಾರಿಗಳ ಸಂಸ್ಥೆಗಳನ್ನು ಬದಲಿಸದೇ ಯಥಾವತ್ತಾಗಿ ಲೋಕೋಪಯೋಗಿ ಇಲಾಖೆಯಿಂದಲೇ ಗುಣಮಟ್ಟದ ಕಾಮಗಾರಿಗಳನ್ನು ಮಾಡಲು ಮುಂದಾಗಬೇಕು ಎಂದು ಒತ್ತಾಯಿಸಿದರು.
ಲೋಕೋಪಯೋಗಿ ಇಲಾಖೆಯಿಂದ ಈಗಾಗಲೇ ತೇಕರಾಳದಿಂದ ವಡಗೇರಿ, ಕುರಕುಂದಿಯಿಂದ ತೇಕರಾಳ, ಕದರಾಪುರದಿಂದ ಗೂಗಲ್ ಬ್ರಿಜ್, ತುಮಕೂರು ಸಂಗಮ ರಸ್ತೆ, ಮರಕಲ್ ಎಂ. ಕೊಳ್ಳೂರು, ರಾಮಸಮುದ್ರ ತಾಂಡಾದಿಂದ ಆಶನಾಳ ತಾಂಡಾ ವರೆಗಿನ ರಸ್ತೆ, ಬೀರನೂರ ಕ್ರಾಸ್ ನಿಂದ ಮದರಕಲ್, ವರ್ಕನಳ್ಳಿ ತಾಂಡಾದಿಂದ ಜಿಲ್ಲಾ ಮುಖ್ಯ ರಸ್ತೆಯವರೆಗಿನ 8 ರಸ್ತೆ ಕಾಮಗಾರಿಗಳನ್ನು ಬದಲು ಮಾಡುವಂತೆ ಶಾಸಕರು ಪತ್ರ ಬರೆದಿರುವುದರಿಂದ ಕಾಮಗಾರಿಗಳು ನೆನೆಗುದಿಗೆ ಬಿದ್ದಿವೆ.
ಬದಲಾವಣೆ ಮಾಡಿ ಶಾಸಕರು ಪತ್ರ ಬರೆದ ಉದ್ದೇಶವೇ ಕಮಿಷನ್ ಧಂದೆ ಮಾಡುವುದಾಗಿದೆ. ಇನ್ನು ಹಲವು ಕಾಮಗಾರಿಗಳನ್ನು ಸಹ ಬದಲಾಯಿಸಿ ಪತ್ರ ಬರೆಯುವ ಸಾಧ್ಯತೆ ಇದೆ. ಈ ಅವ್ಯವಹಾರಕ್ಕೆ ತಾವು ಅವಕಾಶ ಕೊಡಬಾರದು, ಹಾಗೊಂದು ವೇಳೆ ಕೊಟ್ಟದ್ದೇ ಆದಲ್ಲಿ ಇ ಟೆಂಡರ್ ಹಾಗೂ ಇನ್ನಿತರ ನಿಯಮಾವಳಿಗಳು ಏಕೆ ಬೇಕು ಪಿಡಬ್ಲೂಡಿ ಇಲಾಖೆಗಳು ಮುಚ್ಚಿ ಶಾಸಕರು ಹೇಳಿದವರಿಗೆ ಕೆಲಸ ಕೊಡುವಂತಾದರೆ ಕಾನೂನು ನಿಯಮಾವಳಿಗಳು ಏಕೆ? ಇವುಗಳ ಉಸ್ತುವಾರಿ ಮಾಡಬೇಕಾದ ಜಿಲ್ಲಾಧಿಕಾರಿಗಳು ಏಕೆ ಎಂಬ ಪ್ರಶ್ನೆ ಉದ್ಭವಿಸುತ್ತದೆ.
ಆದ್ದರಿಂದ ಕೂಡಲೇ ಇಂತಹ ಬ್ರಷ್ಟಾಚಾರಕ್ಕೆ ತಾವು ಅವಕಾಶ ಮಾಡಿಕೊಡದೇ ನಿಯಮಾವಳಿ ಪಾಲನೆ ಮಾಡಬೇಕು ಹಾಗೂ ಪಿಡಬ್ಲೂಡಿಯಿಂದಲೇ ಈ ಮೇಲೆ ತೋರಿಸಿದ 8 ಕಾಮಗಾರಿಗಳು ನಡೆಸಬೇಕು. ತಪ್ಪಿದಲ್ಲಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಸಿದ್ದುನಾಯಕ ಹತ್ತಿಕುಣಿ ಅಂಬ್ರೇಶ್ ಹತ್ತಿಮನಿ ಸಂತೋಷ್ ನಿರ್ಮಲಕರ್ ಶರಣಪ್ಪ ದಳಪತಿ ವಿಶ್ವರಾಜ ಪಾಟೀಲ್ ಹೊನಗೇರಾ ಮಂಜು ನಾಯ್ಕೋಡಿ ಶರಣು ಹಬ್ಬಳ್ಳಿ ರಮೇಶ್ ಡಿ ನಾಯಕ ಇನ್ನಿತರರು ಇದ್ದರು. ಅಪರ ಜಿಲ್ಲಾಧಿಕಾರಿ ಶರಣಬಸಪ್ಪಗೌಡ ಕೊಟೆಪ್ಪಗೊಳ ಮನವಿ ಸ್ವೀಕರಿಸಿದರು.







