ಯಾದಗಿರಿ | ವಾಹನ ಚಾಲನೆ ಮಾಡುವಾಗ ಮೊಬೈಲ್ ಬಳಸಬೇಡಿ : ಮಿಲಿಂದ ಕುಮಾರ
36ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮ

ಯಾದಗಿರಿ : 36ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಡಾನ್ ಬಾಸ್ಕೋ ಶಾಲೆಯ ಮಕ್ಕಳಿಗೆ ರಸ್ತೆ ಸುರಕ್ಷತೆ ಕುರಿತು ಜಾಗೃತಿ ಅರಿವು ಮೂಡಿಸಲಾಯಿತು ಎಂದು ಯಾದಗಿರಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಮಿಲಿಂದ ಕುಮಾರ ಅವರು ಹೇಳಿದರು.
ಯಾದಗಿರಿ ನಗರದ ಡಾನ್ ಬಾಸ್ಕೋ ಪ್ರೌಢ ಶಾಲೆಯಲ್ಲಿ 36ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
36ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸದಲ್ಲಿ ರಸ್ತೆಯಲ್ಲಿನ ಸುರಕ್ಷತೆ ಕೇವಲ ಧ್ಯೇಯ ವಾಕ್ಯವಾಗದೆ ಜೀವನದ ಸಂಸ್ಕೃತಿ ಆಗಬೇಕು. ರಸ್ತೆಯ ಬಲಭಾಗದಲ್ಲಿ ನಡೆಯಿರಿ, ರಸ್ತೆ ದಾಟಲು ಪಾದಚಾರಿಗಳಿಗಾಗಿ ನಿರ್ಮಿಸಿದ ಕ್ರಾಸಿಂಗ್ ಬಳಸಿ, ನೀವು ರಸ್ತೆದಾಟುವ ಮೊದಲು ಎರಡೂ ಕಡೆ ನೋಡಿ, ರಸ್ತೆಯಲ್ಲಿ ಆಟವಾಡಬೇಡಿ, ನಿಮಗೆ ನಿದ್ರೆ ಬರುವಂತಾದರೆ ಅಥವಾ ಆಯಾಸವಾಗಿದ್ದರೆ ವಾಹನ ಚಾಲನೆ ಮಾಡಬೇಡಿ ಎಂದು ಹೇಳಿದರು.
ವಾಹನ ಚಾಲನೆ ಮಾಡುವಾಗ ಮೊಬೈಲ್ ಬಳಸಬೇಡಿ, ಅಧಿಕ ವೇಗ ಬೇಡ, ವಾಹನ ಚಾಲನೆ ಮಾಡುವಾಗ ಮದ್ಯಪಾನ ಮಾಡಬೇಡಿ, ಯಾವಾಗಲೂ ಹೆಲ್ಮೆಟ್, ಸೀಟ್ ಬೆಲ್ಟ್ ಧರಿಸಿ, ಜೀಬ್ರಾ ಕ್ರಾಸಿಂಗ್ನಲ್ಲಿ ಪಾದಚಾರಿಗಳಿಗೆ ಆದ್ಯತೆ ನೀಡಿ, ಸಾರ್ವಜನಿಕರು ತಮ್ಮ ವಾಹನದ ಇನ್ಸೂರೆನ್ಸ್ ಡ್ರೆಂವಿಂಗ್ ಲೈಸೆನ್ಸ್, ವಾಯು ಮಾಲಿನ್ಯ ಪ್ರಮಾಣ ಪತ್ರ ಸಿಂದುತ್ವದಲ್ಲಿರಿಸಿಕೊಳ್ಳಿ, ದ್ವಿಚಕ್ರ ವಾಹನದಲ್ಲಿ 3 ವಾಹನ ಸವಾರರು ಸವಾರಿ ಮಾಡಬಾರದು, ನಾಳೆ ಬದುಕಲು ಇಂದೇ ಎಚ್ಚರಿಕೆ ನೀಡಿ ಎಂದರು.
36 ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಡಾನ್ಬಾಸ್ಕೋ ಪ್ರೌಢ ಶಾಲೆಯ ಪ್ರಾಂಶುಪಾಲರು, ಸಿಬ್ಬಂದಿ ವರ್ಗ ಹಾಗೂ ಶಾಲಾ ಮಕ್ಕಳಿಗೆ ರಸ್ತೆ ಸುರಕ್ಷತೆ ಕುರಿತು ಮುಜಾಗೃತ ವಿಷಯಗಳ ಕುರಿತು ವಿಶೇಷ ಅರಿವು ಮೂಡಿಸಲಾಯಿತು.
ಈ ಸಂದರ್ಭದಲ್ಲಿ ಮೋಟಾರು ವಾಹನ ನಿರೀಕ್ಷಕರು ಅಯ್ಯಾಳಪ್ಪ, ಮೋಟಾರು ವಾಹನ ನಿರೀಕ್ಷಕರು ಚಂದ್ರಕಾಂತ, ಅಧೀಕ್ಷಕರು ಮೌನೇಶ, ಪ್ರಥಮ ದರ್ಜೆ ಸಹಾಯಕ ಶಿವಕುಮಾರ, ಹರೀಶ ರಾಠೋಡ, ಪ್ರಶಾಂತ, ಕಾಶಿನಾಥ, ಹಾಗೂ ಇನ್ನಿತರರು ಉಪಸ್ಥಿತರಿದ್ದರು.







