ಯಾದಗಿರಿ | ಜಗತ್ತಿನ ಎಲ್ಲ ಸಮಸ್ಯೆಗಳಿಗೆ ಶಿಕ್ಷಣವೇ ಪರಿಹಾರ : ಶಿವಮೂರ್ತಿ ಶಿವಾಚಾರ್ಯರು

ಕೆಂಭಾವಿ : ಜಗತ್ತಿನ ಎಲ್ಲ ಸಮಸ್ಯೆಗಳಿಗೆ ಶಿಕ್ಷಣವೇ ಪರಿಹಾರ ಎಂದು ದೇವಾಪುರದ ಜಡಿಶಾಂತಲಿಂಗೇಶ್ವರ ಮಠದ ಷ.ಬ್ರ.ಶಿವಮೂರ್ತಿ ಶಿವಾಚಾರ್ಯರು ಹೇಳಿದರು.
ಪಟ್ಟಣದ ಸಮೀಪ ಮುದನೂರ ಗ್ರಾಮದ ಶ್ರೀ ದೇವರ ದಾಸಿಮಯ್ಯ ಶಿಕ್ಷಣ ಸಂಸ್ಥೆಯ ಅಡಿಯಲ್ಲಿ ನಡೆಯುತ್ತಿರುವ ಶ್ರೀ ದೇವರ ದಾಸಿಮಯ್ಯ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆಯ ರಜತ ಮಹೋತ್ಸವ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.
ಅಂದಿನ ದೇವರ ದಾಸಿಮಯ್ಯನವರ ಆಲೋಚನೆಗಳು ಇನ್ನೂ ಈ ಗ್ರಾಮದಲ್ಲಿ ಉಳಿದಿವೆ ಎಂಬುದಕ್ಕೆ ಶಾಂತರೆಡ್ಡಿ ಚೌದ್ರಿಯವರೆ ಸಾಕ್ಷಿ. ಅಕ್ಷರ ದಾಸೋಹದ ಸಲುವಾಗಿ ತಮ್ಮ ಆಸ್ತಿಯನ್ನೆ ಕೊಟ್ಟಿದ್ದಾರೆ. ಆಸ್ತಿ ಶಾಶ್ವತವಾದುದಲ್ಲ ಆದರೆ ಆದರ್ಶ ಶಾಶ್ವತವಾದುದು. ಆದರ್ಶವೆಂಬುದು ನಾವು ಸತ್ತ ಮೇಲೂ ಬದುಕಿರುತ್ತದೆ ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಯಾದಗಿರಿ ಶಾಸಕ ಚೆನ್ನಾರೆಡ್ಡಿ ತುನ್ನೂರು, ಗ್ರಾಮಗಳಲ್ಲಿಯೂ ಉತ್ತಮ ಶಿಕ್ಷಣ ನೀಡಬಹುದು ಎಂದು ದಾಸಿಮಯ್ಯ ಶಿಕ್ಷಣ ಸಂಸ್ಥೆ ನಿರೂಪಿಸಿದೆ. ಗ್ರಾಮಗಳ ಮಟ್ಟದಲ್ಲಿಯೆ ಉತ್ತಮ ಶಿಕ್ಷಣ ದೊರೆಯುವಾಗ ಪಾಲಕರು ಪಟ್ಟಣದತ್ತ ಮುಖ ಮಾಡಬಾರದು. ಪಾಲಕರು ಮನೆಯಲ್ಲಿ ಮಕ್ಕಳಿಗೆ ಹೆಚ್ಚಿನ ಸಮಯವನ್ನು ಮೀಸಲಿಡಬೇಕು ಎಂದು ಹೇಳಿದರು.
ಪ್ರಾಸ್ತಾವಿಕ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಶಾಂತರೆಡ್ಡಿ ಚೌದ್ರಿ, ಇಂಜಿನಿಯರಿಂಗ್ ಪದವಿ ಮುಗಿದ ತಕ್ಷಣ ಕೆಲಸಕ್ಕಾಗಿ ಪಟ್ಟಣಕ್ಕೆ ವಲಸೆ ಹೋಗದೆ, ನಮ್ಮ ಗ್ರಾಮದ ಮಕ್ಕಳ ಭವಿಷ್ಯದ ದೃಷ್ಟಿಯಿಂದ 25 ವರ್ಷಗಳ ಹಿಂದೆ ಈ ಸಂಸ್ಥೆಯನ್ನು ಕಟ್ಟಲಾಯಿತು ಎಂದರು.
ಸ್ವಾಗತ ಸಮಿತಿ ಅಧ್ಯಕ್ಷ ಸುರೇಶ ಸಜ್ಜನ, ಎಚ್.ಸಿ.ಪಾಟೀಲ, ಜಯಲಲಿತಾ ಪಾಟೀಲ ಮಾತನಾಡಿದರು. ಇದೇ ಸಂದರ್ಭದಲ್ಲಿ ಜ್ಞಾನಸಿರಿ ತವನಿಧಿ ಸ್ಮರಣ ಸಂಚಿಕೆಯ ಲೋಗೊ ಬಿಡುಗಡೆಗೊಳಿಸಲಾಯಿತು.
ಮುದನೂರಿನ ಷ.ಬ್ರ.ಗಿರಿಧರರಾದ್ಯ ಶಿವಾಚಾರ್ಯರು, ಷ.ಬ್ರ.ಚನ್ನಸಿದ್ದಮಲ್ಲಿಕಾರ್ಜುನ ಶಿವಾಚಾರ್ಯರು, ಕೂಡಲಗಿಯ ಪೂಜ್ಯ ಮೃತ್ಯುಂಜಯ ಬಾಬಾ ಮಹಾರಾಜರು, ಕೆಂಭಾವಿಯ ಷ.ಬ್ರ. ಚನ್ನಬಸವ ಶಿವಾಚಾರ್ಯರು, ವೇ.ಮೂ.ಬಸಯ್ಯಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿದ್ದರು.
ಮುಖಂಡರಾದ ಹನುಮಂತನಾಯಕ (ಬಬ್ಲುಗೌಡ), ವಿಶ್ವನಾಥರೆಡ್ಡಿ ದರ್ಶನಾಪುರ, ಆರ.ಸಿ.ಘಾಳೆ, ಮುಕುಂದ ನಾಯಕ, ಪ್ರಕಾಶ ಅಂಗಡಿ, ಪಿಎಸ್ಐ ಹಣಮಂತ ಸಿದ್ದಾಪುರ, ಮಲ್ಲಿಕಾರ್ಜುನ ಹತ್ತಿಕುಣಿ ಸೇರಿದಂತೆ ಬಸವೇಶ್ವರ ಬ್ಯಾಂಕಿನ ಎಲ್ಲ ನಿರ್ದೇಶಕರು ಹಾಜರಿದ್ದರು.
ಬಸವರಾಜ ಬಂಟನೂರ, ಸೋಮಶೇಖರ ಪತ್ತಾರ, ರಮೇಶ ಹೂಗಾರ ಸಂಗೀತ ಸೇವೆ ಒದಗಿಸಿದರು. ಶಿಕ್ಷಕ ಸೇವು ಜಾಧವ ನಿರೂಪಿಸಿದರು. ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸುರೇಶ ಸಜ್ಜನ ಸ್ವಾಗತಿಸಿದರು. ಮುಖ್ಯಗುರು ಮಹೇಶ ತಾತರೆಡ್ಡಿ ವಂದಿಸಿದರು.







