ಯಾದಗಿರಿ | ಶಾಲೆಗಳ ಮಕ್ಕಳ ದಾಖಲಾತಿ, ಬಿಸಿಯೂಟದಲ್ಲಿನ ಲೋಪ ಪರಿಗಣನೆ : ಶಶಿಧರ್ ಕೋಸಂಬೆ

ಯಾದಗಿರಿ : ಶಾಲೆಗಳ ಮಕ್ಕಳ ದಾಖಲಾತಿ, ಹಾಜರಾತಿ ಮತ್ತು ಬಿಸಿಯೂಟದಲ್ಲಿನ ಲೋಪವನ್ನು ಗಂಭೀರವಾಗಿ ಪರಿಗಣಿಸಲಾಗುತ್ತದೆ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಶಶಿಧರ್ ಕೋಸಂಬೆ ಅವರು ಹೇಳಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ಶಿಕ್ಷಣ ಇಲಾಖೆ, ಪೋಲಿಸ್ ಇಲಾಖೆ ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ ಏರ್ಪಡಿಸಲಾಗಿದ್ದ ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ- 2009ರ ಕುರಿತ ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಶಿಕ್ಷಣ ಗುಣಮಟ್ಟ ಸುಧಾರಣೆಯಾಗಬೇಕು. ಫಲಿತಾಂಶ ಹೆಚ್ಚಳಕ್ಕೆ ಪರಿಣಾಮಕಾರಿಯಾದ ಕ್ರಮಗಳನ್ನು ಕೈಗೊಳ್ಳಬೇಕು. ವಿಶೇಷವಾಗಿ ಮಕ್ಕಳ ದಾಖಲಾತಿ, ಹಾಜರಾತಿ ಹಾಗೂ ಬಿಸಿಯೂಟ ಪೂರೈಕೆಯಲ್ಲಿ ಯಾವುದೇ ರೀತಿಯ ಲೋಪ ಆಗದಂತೆ ಎಚ್ಚರಿಕೆ ವಹಿಸಬೇಕು. ಪದೇ ಪದೇ ಇವುಗಳಲ್ಲಿನ ಲೋಪಗಳನ್ನು ಆಯೋಗವು ಗಂಭೀರವಾಗಿ ಪರಿಗಣಿಸಲಿದೆ ಎಂದು ಹೇಳಿದರು.
ಇಲಾಖೆಗಳ ಜೊತೆಗೆ ಮಕ್ಕಳ ಸಮಸ್ಯೆಗಳನ್ನು ಅಧಿಕಾರಿಗಳು ಪರಿಹರಿಸಬೇಕು. ಮಕ್ಕಳು ಭಯದ ವಾತಾವರಣದಲ್ಲಿ ಶಿಕ್ಷಣ ಪಡೆಯದಂತೆ ಎಚ್ಚರಿಕೆ ವಹಿಸಿ ಭಯಮುಕ್ತ ವಾತಾವರಣ ನಿರ್ಮಿಸಬೇಕು. ತಮ್ಮ ಮಕ್ಕಳಂತೆ ಇತರರ ಮಕ್ಕಳನ್ನು ನೋಡಿಕೊಂಡು ಅವರಿಗೆ ಕಡ್ಡಾಯವಾದ, ಗುಣಮಟ್ಟದ ಶಿಕ್ಷಣವನ್ನು ದೊರೆಯುವಂತೆ ನೋಡಿಕೊಳ್ಳಲು ಅವರು ಸಲಹೆ ನೀಡಿದರು.
ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ-2009 ಕುರಿತು ವಿವರ ನೀಡಿದ ರಾಜಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ನಿಕಟಪೂರ್ವ ಸದಸ್ಯರಾದ ಎಚ್.ಸಿ.ರಾಘವೇಂದ್ರ ಅವರು, ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು. ಮಕ್ಕಳಿಗೆ ಅವರಿಗೆ ಸಿಗಬೇಕಾದ ಮೂಲಭೂತ ಹಕ್ಕುಗಳು ಸಕಾಲಕ್ಕೆ ದೊರಕಿಸಬೇಕು. ಗುಣಮಟ್ಟದ ಶಿಕ್ಷಣ -ರಕ್ಷಣೆ ಒದಗಿಸುವಂತೆ ತಿಳಿಸಿದ ಅವರು ವಿವಿಧ ಕಾನೂನುಗಳ ಕುರಿತು ಸೂಕ್ತ ಮಾಹಿತಿ ನೀಡಿದರು.
ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಚನ್ನಬಸಪ್ಪ ಮುಧೋಳ, ಮಕ್ಕಳ ರಕ್ಷಣಾಧಿಕಾರಿ ಪ್ರೇಮಮೂರ್ತಿ ಉಪಸ್ಥಿತರಿದ್ದರು.







