ಯಾದಗಿರಿ | ಜಾತಿ ಕಾಲಂ ನಲ್ಲಿ ಕೋಲಿ, ಕಬ್ಬಲಿಗ ಎಂದು ನಮೂದಿಸಿ : ದತ್ತಾತ್ರೇಯರೆಡ್ಡಿ

ಯಾದಗಿರಿ: ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 7ರ ವರೆಗೆ ಹಿಂದುಳಿದ ವರ್ಗಗಳ ಆಯೋಗದಿಂದ ನಡೆಯಲಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಸಂದರ್ಭದಲ್ಲಿ ಮನೆಮನೆಗೆ ಭೇಟಿ ನೀಡುವ ಗಣತಿಗಾರರಿಗೆ ಸಮಾಜದ ಬಾಂಧವರು ಸರಿಯಾದ ಮಾಹಿತಿಯನ್ನು ನೀಡಬೇಕು ಎಂದು ಕೋಲಿ ಸಮಾಜದ ರಾಜ್ಯಾಧ್ಯಕ್ಷ ದತ್ತಾತ್ರೇಯರೆಡ್ಡಿ ಕರೆ ನೀಡಿದರು.
ಯಾದಗಿರಿ ಪತ್ರಿಕಾ ಭವನದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾತಿ ಕಾಲಂ (9)ನಲ್ಲಿ ತಮ್ಮ ಪ್ರಾಂತ್ಯಕ್ಕೆ ಅನುಗುಣವಾಗಿ ಕೋಲಿ, ಕಬ್ಬಲಿಗ, ಬೇಸ್ತ ಎಂಬುದರಲ್ಲಿ ಒಂದನ್ನು ಮಾತ್ರ ನಮೂದಿಸಬೇಕು. ಉಪ ಜಾತಿ ಕಾಲಂ (10)ನಲ್ಲಿ ಶಾಲಾ ದಾಖಲಾತಿಯಲ್ಲಿ ಇರುವಂತೆ ಬರೆಯಬೇಕು. ಪರ್ಯಾಯ ಪದಗಳ ಕಾಲಂ (11)ನಲ್ಲಿ ಟೋಕರೆ ಕೋಲಿ ಎಂದು ನಮೂದಿಸಬೇಕು ಎಂದು ಹೇಳಿದರು.
ಈ ಸಮೀಕ್ಷೆಯ ಅಂಕಿಅಂಶವೇ ಸರ್ಕಾರ ಹಾಗೂ ರಾಜಕೀಯ ಪಕ್ಷಗಳಿಗೆ ನಮ್ಮ ನೈಜ ಜನಸಂಖ್ಯೆಯ ಚಿತ್ರಣ ನೀಡಲಿದೆ. ಅಂಬೇಡ್ಕರ್ ಸಂವಿಧಾನದಲ್ಲಿ ಹೇಳಿದಂತೆ ಅಂಕಿಅಂಶಗಳ ಆಧಾರದ ಮೇಲೆ ನಮ್ಮ ಸಮಾಜಕ್ಕೆ ಸರ್ಕಾರಿ ಯೋಜನೆಗಳ ಪ್ರಯೋಜನ ಮತ್ತು ರಾಜಕೀಯ ಪ್ರಾತಿನಿಧ್ಯ ಸಿಗಲಿದೆ. ಸಂಖ್ಯೆ ಹೆಚ್ಚಾದಷ್ಟೂ ಪಾಲು ಹೆಚ್ಚುತ್ತದೆ ಎಂಬ ಮಾತು ಇಲ್ಲಿ ಅನ್ವಯಿಸುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಅಖಿಲ ಭಾರತೀಯ ಕೋಲಿ ಸಮಾಜದ ಉಪಾಧ್ಯಕ್ಷ ಡಾ. ಇಂದ್ರಾಶಕ್ತಿ, ರಾಜ್ಯ ಸಂಘಟನಾ ಕಾರ್ಯದರ್ಶಿ ಉಮೇಶ ಕೆ. ಮುದ್ನಾಳ, ಶಿಸ್ತು ಸಮಿತಿ ಸದಸ್ಯ ಡಾ. ಟಿ.ಡಿ. ರಾಜು, ಪ್ರಧಾನ ಕಾರ್ಯದರ್ಶಿ ದೇವೇಂದ್ರ ಚಿಗರಹಳ್ಳಿ, ಸಮಾಜದ ಮುಖಂಡರು ಶ್ರೀರಾಜು ಗುರುಸ್ವಾಮಿ, ವಿಜಯಕುಮಾರ ಡಿ., ಅಂಬ್ರೇಶ ದೋರನಹಳ್ಳಿ, ಪವನ ಮುದ್ನಾಳ ಮತ್ತಿತರರು ಉಪಸ್ಥಿತರಿದ್ದರು.







