Yadagiri | ರೈತರ ಕೃಷಿ ಪಂಪಸೆಟ್‌ಗಳಿಗೆ ಸೂಕ್ತ ವಿದ್ಯುತ್ ಪೂರೈಸಲು ಆಗ್ರಹಿಸಿ ರೈತರಿಂದ ಮೌನ ಪ್ರತಿಭಟನೆ

ಯಾದಗಿರಿ : ಕಲ್ಯಾಣ ಕರ್ನಾಟಕ ಭಾಗದಲ್ಲಿ ಭೀಕರ ಬರಗಾಲ ಉಂಟಾಗಿರುವ ನಡುವೆಯೇ ಕೃಷಿ ಪಂಪ್‌ಸೆಟ್‌ಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆಯಾಗುತ್ತಿಲ್ಲ ಎಂದು ಆರೋಪಿಸಿ ಯಾದಗಿರಿ ತಾಲೂಕಿನ ಬಾಚವಾರ ಗ್ರಾಮದಲ್ಲಿ ರೈತರು ಹಾಗೂ ಸಾರ್ವಜನಿಕರು ಸ್ವಯಂಪ್ರೇರಿತವಾಗಿ ಮೌನ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಭಾಗವಹಿಸಿದ ರೈತರು, ಯಾದಗಿರಿ ಹಾಗೂ ಗುರುಮಠಕಲ್ ತಾಲೂಕುಗಳಲ್ಲಿ ಅನೇಕ ಸಣ್ಣ ಮತ್ತು ಅಲ್ಪ ರೈತರು ಬೋರ್‌ವೆಲ್ ಕೊರೆಸಿ ವಿದ್ಯುತ್ ಸಂಪರ್ಕ ಪಡೆದು ಕೃಷಿ ನಡೆಸುತ್ತಿದ್ದು, ಕಳೆದ 15 ದಿನಗಳಿಂದ ಸಮರ್ಪಕ ತ್ರಿಫೇಸ್ ವಿದ್ಯುತ್ ಪೂರೈಕೆಯಾಗದ ಕಾರಣ ಬೆಳೆಗಳು ಒಣಗುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಂಗಾರು ಮಳೆ ಕೈಕೊಟ್ಟ ಪರಿಣಾಮ ಸಾಲ ಮಾಡಿ ಬಿತ್ತನೆ ಮಾಡಿದ ಬೆಳೆಗಳು ಈಗಾಗಲೇ ನಾಶವಾಗಿವೆ. ಕೆಲ ರೈತರು ಬೋರ್‌ವೆಲ್‌ಗಳ ಮೂಲಕ ತರಕಾರಿ, ಭತ್ತ, ಹತ್ತಿ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆದಿದ್ದರೂ, ಜೆಸ್ಕಾಂನಿಂದ ನಿಗದಿತ 7 ಗಂಟೆಗಳ ತ್ರಿಫೇಸ್ ವಿದ್ಯುತ್ ಪೂರೈಕೆ ಸಿಗುತ್ತಿಲ್ಲ. ಪದೇ ಪದೇ ವಿದ್ಯುತ್ ಕಡಿತವಾಗುತ್ತಿರುವುದರಿಂದ ಕೃಷಿ ಪಂಪ್‌ಸೆಟ್‌ಗಳು ಸುಟ್ಟುಹೋಗುತ್ತಿದ್ದು, ನೀರಿನ ಕೊರತೆಯಿಂದ ಬೆಳೆಗಳು ಬಿಸಿಲಿನ ತಾಪಕ್ಕೆ ಬಾಡುತ್ತಿವೆ ಎಂದು ದೂರಿದರು.
ಯಾದಗಿರಿ ಮತ್ತು ಗುರುಮಠಕಲ್ ತಾಲೂಕುಗಳ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಕೃಷಿ ಪಂಪ್‌ಸೆಟ್‌ಗಳನ್ನು ಅವಲಂಬಿಸಿ ಜೀವನ ಸಾಗಿಸುತ್ತಿದ್ದಾರೆ. ಮಳೆ ಕೊರತೆ ಮತ್ತು ವಿದ್ಯುತ್ ಸಮಸ್ಯೆಯಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಉದ್ಯೋಗ ಅರಸಿ ಬೆಂಗಳೂರು, ಪುಣೆ, ಮುಂಬೈ ಸೇರಿದಂತೆ ವಿವಿಧ ನಗರಗಳಿಗೆ ವಲಸೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.
ಕೂಡಲೇ ಸಮರ್ಪಕ ವಿದ್ಯುತ್ ಪೂರೈಕೆ ಕಲ್ಪಿಸಿ ರೈತರ ಸಮಸ್ಯೆ ಪರಿಹರಿಸಬೇಕು ಎಂದು ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರವನ್ನು ಪ್ರತಿಭಟನಾಕಾರರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯ ಮುಖಂಡರಾದ ಅರ್ಜುನಪ್ಪ ಬಡಿಗೇರ್, ಹಿರಿಯ ಹೋರಾಟಗಾರರಾದ ಉಮೇಶ್ ಮುದ್ನಾಳ್, ರೈತ ಮುಖಂಡರಾದ ಶಿವಯೋಗಿ ಬಡಿಗೇರ್, ಮಾಣಿಕರಾಯ ಡೊಂಕನೂರ್, ಶಾಂತಪ್ಪ, ಬಸವರಾಜ್ ಕವಲ್ದಾರ್, ಮಂಜುನಾಥ ಬಡಿಗೇರ ಸೇರಿದಂತೆ ರೈತರು ಉಪಸ್ಥಿತರಿದ್ದರು.






