Yadagiri | ಸಂಚಾರಿ ನಿಯಮ ಪಾಲಿಸಿ ಅಮೂಲ್ಯ ಜೀವ ಉಳಿಸಿಕೊಳ್ಳಿ: ನ್ಯಾ.ಮರುಳಸಿದ್ದಾರಾಧ್ಯ

ಯಾದಗಿರಿ: ಸಾರ್ವಜನಿಕರ ನೆಮ್ಮದಿಯ ಬದುಕಿಗಾಗಿ ಜಾರಿಗೊಳಿಸಿರುವ ಸಂಚಾರಿ ನಿಯಮಗಳನ್ನು ವಾಹನ ಸವಾರರು ಕಡ್ಡಾಯವಾಗಿ ಪಾಲಿಸಬೇಕು ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಮರುಳಸಿದ್ದಾರಾಧ್ಯ ಎಚ್.ಜೆ. ಹೇಳಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಪೊಲೀಸ್ ಇಲಾಖೆ, ಜಿಲ್ಲಾ ಹೋಂಗಾರ್ಡ್, ಜಿಲ್ಲಾ ಆಟೋ ಚಾಲಕರ ಸಂಘ, ಕರ್ನಾಟಕ ಚಾಲಕರ ಸಂಘದ ಜಿಲ್ಲಾ ಘಟಕ, ಶಾಲಾ ಶಿಕ್ಷಣ ಇಲಾಖೆ, ಪದವಿ ಶಿಕ್ಷಣ ಇಲಾಖೆ, ಜಿಲ್ಲಾ ವಕೀಲರ ಸಂಘ ಹಾಗೂ ಶಶಿ ಮತ್ತು ಏಜುಕೇಶನ್ ಟ್ರಸ್ಟ್ ಆಶ್ರಯದಲ್ಲಿ ಬುಧವಾರ ಜಿಲ್ಲಾ ಪೊಲೀಸ್ ಭವನದ ಆವರಣದಲ್ಲಿ ಆಯೋಜಿಸಿದ್ದ ಸಂಚಾರಿ ನಿಯಮಗಳ ಪಾಲನೆ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕಾನೂನುಗಳನ್ನು ರೂಪಿಸುವುದು ಹಾಗೂ ಜಾರಿಗೊಳಿಸುವುದು ಜನರ ಹಿತಕ್ಕಾಗಿಯೇ ಎಂಬುದನ್ನು ಎಲ್ಲರೂ ಅರಿತುಕೊಳ್ಳಬೇಕು. ವಾಹನ ಸವಾರರ ಜೀವಕ್ಕೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದಲೇ ಸಂಚಾರಿ ನಿಯಮಗಳನ್ನು ರೂಪಿಸಲಾಗಿದೆ. ಅವುಗಳನ್ನು ಪಾಲಿಸುವ ಮೂಲಕ ಕಾನೂನಿಗೆ ಗೌರವ ನೀಡಿ, ಅಮೂಲ್ಯ ಜೀವಗಳನ್ನು ಉಳಿಸಿಕೊಳ್ಳಬೇಕು ಎಂದು ಹೇಳಿದರು.
ಸೆ.23ರಿಂದ ನಗರ ಸೇರಿದಂತೆ ಜಿಲ್ಲೆಯ ಎಲ್ಲೆಡೆ ಸಂಚಾರಿ ನಿಯಮಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ನಡೆಯುತ್ತಿದೆ. ಇದಕ್ಕೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ದೊರೆತಿದೆ ಎಂದು ನ್ಯಾಯಾಧೀಶರು ಸಂತಸ ವ್ಯಕ್ತಪಡಿಸಿದರು.
ಎಸ್‌ಪಿ ಪೃಥ್ವಿಕ್ ಶಂಕರ್ ಮಾತನಾಡಿ, ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು ಹಾಗೂ ಕಾರು ಚಾಲಕರು ಸೀಟ್‌ಬೆಲ್ಟ್ ಹಾಕಿಕೊಂಡೇ ವಾಹನ ಚಲಾಯಿಸಬೇಕು. ವಾಹನಗಳಿಗೆ ಅಗತ್ಯ ದಾಖಲೆಗಳನ್ನು ಹೊಂದಿರಬೇಕು. ಪೊಲೀಸರು ಹಿಡಿದಾಗ ದಂಡ ಕಟ್ಟಿದರಾಯಿತು ಎಂಬ ಮನೋಭಾವದಿಂದ ಸಾರ್ವಜನಿಕರು ಹೊರಬರಬೇಕು ಎಂದು ಹೇಳಿದರು.
ಜನರ ಸುರಕ್ಷತೆಯ ದೃಷ್ಟಿಯಿಂದ ಕಾನೂನು ನಿಯಮಗಳನ್ನು ಕಠಿಣವಾಗಿ ರೂಪಿಸಲಾಗಿದೆ. ಆದರೂ ಕೆಲವರು ಅವುಗಳನ್ನು ಅರ್ಥಮಾಡಿಕೊಳ್ಳದೆ ಸಂಚಾರಿ ನಿಯಮಗಳನ್ನು ಉಲ್ಲಂಘಿಸುತ್ತಲೇ ವಾಹನ ಚಲಾಯಿಸುತ್ತಿದ್ದಾರೆ. ಇದರಿಂದ ತಮ್ಮ ಜೀವಕ್ಕೆ ಮಾತ್ರವಲ್ಲದೆ ಕುಟುಂಬದವರಿಗೂ ಸಾಕಷ್ಟು ತೊಂದರೆ ಉಂಟಾಗುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ನಿಯಮಗಳನ್ನು ಪಾಲಿಸುವ ಮೂಲಕ ಅಮೂಲ್ಯ ಜೀವಗಳನ್ನು ಉಳಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಅಭಿಯಾನದ ಉಸ್ತುವಾರಿ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ಹಿರಿಯ ಸಿವಿಲ್ ನ್ಯಾಯಾಧೀಶ ಮರಿಯಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು.
ಹೆಚ್ಚುವರಿ ಎಸ್‌ಪಿ ಧರಣೇಶ, ಜಿಲ್ಲಾ ಹೋಂಗಾರ್ಡ್ ಕಮಾಂಡರ್ ಈರಣ್ಣ, ಡಿವೈಎಸ್‌ಪಿಗಳಾದ ಭರತ್ ಕುಮಾರ್ ತಳವಾರ್ ಹಾಗೂ ಸುರೇಶ ನಾಯಕ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಸಿ.ಎಸ್. ಮಾಲಿಪಾಟೀಲ್, ಮಲ್ಲಿಕಾರ್ಜುನ ಶಿರಗೋಳ, ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
ಜಿಲ್ಲಾ ಪೊಲೀಸ್ ಭವನದಿಂದ ಮೈಲಾಪುರ ಅಗಸಿವರೆಗೆ ಅಭಿಯಾನದ ಅಂಗವಾಗಿ ಪಾದಯಾತ್ರೆ ನಡೆಯಿತು.






