ಯಾದಗಿರಿ | ಪೊಲೀಸ್ ಠಾಣೆಯಲ್ಲಿ ʼತೆರೆದ ಮನೆʼ ಕಾರ್ಯಕ್ರಮದ ಬಗ್ಗೆ ಶಾಲಾ ಮಕ್ಕಳಿಗೆ ಮಾಹಿತಿ
ಯಾದಗಿರಿ/ ಸೈದಾಪುರ : ಪೊಲೀಸ್ ಎಂದರೆ ಜನಸಾಮಾನ್ಯರ ಕಷ್ಟದ ಸಮಸ್ಯೆಗಳಿಗೆ ತಕ್ಷಣವೇ ಸ್ಪಂದಿಸುವ ರಕ್ಷಕ ಎಂದು ಸೈದಾಪುರ ಪೊಲೀಸ್ ಠಾಣೆಯ ಪಿಐ ವಿನಾಯಕ್ ಅವರು ಶಾಲಾ ವಿದ್ಯಾರ್ಥಿಗಳಿಗೆ ತಿಳಿಸಿದರು.
ಪಟ್ಟಣದ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದ ಸಾವೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಠಾಣೆ ಮತ್ತು ಅಧಿಕಾರಿ, ಸಿಬ್ಬಂದಿಗಳ ಕಾರ್ಯ ವೈಖರಿ ಬಗ್ಗೆ ಮಕ್ಕಳಿಗೆ ತಿಳಿಸಿ ಕೊಡುವ ʼತೆರೆದ ಮನೆ ಎಂಬ ವಿನೂತನ ಕಾರ್ಯಕ್ರಮʼದಲ್ಲಿ ಭಾಗವಹಿಸಿ ಮಾತನಾಡಿದರು.
ಸಾಮಾನ್ಯ ಜನರು ಭಯಮುಕ್ತವಾಗಿ ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ಹತ್ತಿರವಾಗುವ ನಿಟ್ಟಿನಲ್ಲಿ ಎಲ್ಲ ಪೊಲೀಸ್ ಠಾಣೆಯಲ್ಲಿ “ತೆರೆದ ಮನೆ’ ಎಂಬ ನೂತನ ಕಾರ್ಯಕ್ರಮ ಶುರುವಾಗಿದ್ದು, ಪೊಲೀಸರೆಂದರೆ ಜನಸಾಮಾನ್ಯರಲ್ಲಿ ಇರುವ ಭಯವನ್ನು ತೊಲಗಿಸು ಮಹತ್ವದ ಕಾರ್ಯಕ್ರಮ ಇದಾಗಿದೆ. ಪ್ರಮುಖವಾಗಿ ಮಕ್ಕಳ ಹಕ್ಕು ಮತ್ತು ಕರ್ತವ್ಯಗಳ ರಕ್ಷಣೆ ಮತ್ತು ಪಾಲನೆ ಬಗ್ಗೆ ತಿಳುವಳಿಕೆ ಮೂಡಿಸುವುದು ಎಂದರು.
ಅಂಗ್ಲ ಶೋಧನಾ ಪುಸ್ತಕ, ಕೈದಿ ಬಂಧನ ಪುಸ್ತಕ, ಸಮನ್ಸ್ ನೋಂದಣಿ, ವಾರಂಟ್ ನೋಂದಣಿ, ಎಂಒಬಿ ಪುಸ್ತಕ, ರೌಡಿ ರಿಜಿಸ್ಟರ್, ಪೂರ್ವ ಸಜಾ ಅಪರಾಧಿ ನೋಂದಣಿ, ಬಂದೂಕು ನೋಂದಣಿ, ಸಣ್ಣ ಅಪರಾಧ ಪುಸ್ತಕ, ಮೋಟಾರು ವಾಹನ ಅಪರಾಧ ಪುಸ್ತಕ ಹಾಗೂ ಅಪರಾಧಿ ದಾಖಲಾತಿ ಪುಸ್ತಕ, ಕಾನೂನು ತಿಳಿವಳಿಕೆ, ಮಕ್ಕಳ ಸುರಕ್ಷತೆ, ರಸ್ತೆ ಸಂಚಾರ ನಿಯಮ, ಮಕ್ಕಳ ಮೇಲೆ ದೌರ್ಜನ್ಯ ಪ್ರಕರಣ ಸೇರಿದಂತೆ ವಿದ್ಯಾರ್ಥಿಗಳಿಗೆ ಉಪಯುಕ್ತವಾಗಿರುವ ಕಾನೂನುಗಳ ಬಗ್ಗೆಯೂ ಮಕ್ಕಳಿಗೆ ತಿಳಿವಳಿಕೆ ನೀಡಿದರು.
ಮಕ್ಕಳಿಗೆ ತೊಂದರೆಯಾದರೆ ಕೂಡಲೇ 112,198 ಸಂಖ್ಯೆಗೆ ಕರೆ ಮಾಡಬಹುದು. ಬಾಲ್ಯ ವಿವಾಹ, ಬಾಲ ಕಾರ್ಮಿಕ ಪದ್ಧತಿ ನಿಷೇಧ ಮಾಡಲು ಮಕ್ಕಳಿಗೆ ಮಾಹಿತಿ ನೀಡಿದರು. ಮದ್ಯಪಾನ, ಧೂಮಪಾನದಂತಹ ದುಶ್ಚಟಗಳಿಗೆ ಬಲಿಯಾಗದಂತೆ ತಿಳಿಸಿದರು.
ಪೊಲೀಸ್ ಬಗೆಗಿನ ಭಯ ಹೋಗಲಾಡಿಸುವುದರ ಜೊತೆಗೆ ಮಕ್ಕಳಿಗೆ ಪೊಲೀಸ್ ಕಾರ್ಯವೈಖರಿಯ ಪರಿಚಯ ಮಾಡಿಸಲಾಗುತ್ತದೆ. ಇಲಾಖೆಯು ದಿನದ 24ಗಂಟೆ ನಿಮ್ಮ ಸೇವೆಯಲ್ಲಿರುತ್ತದೆ ಎಂದರು.
ಈ ಸಂದರ್ಭದಲ್ಲಿ ಎಎಸ್ಐ ಚಂದ್ರಕಾಂತ, ರಾಜಕುಮಾರ, ಅನ್ನಪೂರ್ಣ, ಶಿಕ್ಷಕ ಮಂಜುನಾಥ, ಅತಿಥಿ ಶಿಕ್ಷಕರಾದ ಹಣಮಂತ, ಬಸವರಾಜ ಹಾಗೂ ವಿದ್ಯಾರ್ಥಿಗಳು ಸೇರಿದಂತೆ ಇತರರಿದ್ದರು.