Yadagiri | ಹತ್ತಿ–ತೊಗರಿ ಬೆಳೆಗಾರರಿಗೆ ಮಧ್ಯಂತರ ಪರಿಹಾರ; 7 ದಿನಗಳಲ್ಲಿ ಜಂಟಿ ಸಮೀಕ್ಷೆ ವರದಿ ಸಲ್ಲಿಸಲು ಡಿಸಿ ಸೂಚನೆ

ಯಾದಗಿರಿ: 2026–27ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಹತ್ತಿ ಮತ್ತು ತೊಗರಿ ಬೆಳೆಗಳಿಗೆ ಬೆಳೆ ವಿಮೆ ಮಾಡಿಸಿರುವ ಜಿಲ್ಲೆಯ ರೈತರಿಗೆ ಮಧ್ಯಂತರ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಜಂಟಿ ಸಮೀಕ್ಷೆ ನಡೆಸಿ 7 ದಿನಗಳೊಳಗೆ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಸೋಮವಾರ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ PMFBY – Mid Season Adversity Invoke ಜಿಲ್ಲಾ ಮಟ್ಟದ ಸಮಿತಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.
ಬೆಳೆ ವಿಮೆ ಯೋಜನೆಯ ಮಾರ್ಗಸೂಚಿಯಂತೆ ಜಿಲ್ಲೆಯಲ್ಲಿ ಹತ್ತಿ ಮತ್ತು ತೊಗರಿ ಬೆಳೆ ಬೆಳೆದಿರುವ ವಿಮಾದಾರ ರೈತರಿಗೆ ಮಧ್ಯಂತರ ಪರಿಹಾರ ನೀಡಲು ಕೃಷಿ ಇಲಾಖೆ ಅಧಿಕಾರಿಗಳು ಹಾಗೂ ಬೆಳೆ ವಿಮಾ ಕಂಪನಿಯ ಪ್ರತಿನಿಧಿಗಳು ತಕ್ಷಣವೇ ಜಂಟಿ ಸಮೀಕ್ಷೆ ಕೈಗೊಳ್ಳಬೇಕು ಎಂದು ಸೂಚಿಸಲಾಯಿತು.
ಜಂಟಿ ಸಮೀಕ್ಷೆಯ ವರದಿಯನ್ನು 7 ದಿನಗಳೊಳಗೆ ಕೇಂದ್ರ ಕಚೇರಿಗೆ ಸಲ್ಲಿಸಿ, ಅರ್ಹ ರೈತರಿಗೆ ಮಧ್ಯಂತರ ಪರಿಹಾರ ದೊರೆಯುವಂತೆ ಅಗತ್ಯ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು.
ಸಭೆಯಲ್ಲಿ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳು, ಅಗ್ರ ಶ್ರೇಣಿ ಬ್ಯಾಂಕ್ ವ್ಯವಸ್ಥಾಪಕರು, ಉಪ ಕೃಷಿ ನಿರ್ದೇಶಕರು, ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕರು, ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕರು ಹಾಗೂ ಎಲ್ಲಾ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರು ಸೇರಿದಂತೆ ಹೋಬಳಿಯ ಕೃಷಿ ಅಧಿಕಾರಿಗಳು ಉಪಸ್ಥಿತರಿದ್ದರು.






