ಯಾದಗಿರಿ | ರೈತರ ಬದುಕಿಗೆ ಬೆಳಕು ತರುವ ಕೆಲಸವಾಗಬೇಕಿದೆ : ಶಾಸಕ ಶರಣಗೌಡ ಕಂದಕೂರ

ಯಾದಗಿರಿ : ನನ್ನ ಮತಕ್ಷೇತ್ರದಲ್ಲಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಹೇಗೆ ಒತ್ತು ನೀಡಿ ಅಭಿವೃದ್ಧಿ ಪಡಿಸುತ್ತಿದ್ದೇನೆಯೋ ಹಾಗೆಯೇ ನಮ್ಮ ತಂದೆಯವರ ಕನಸಾದ ರೈತರ ಬದುಕು ಸುಧಾರಿಸುವ ನಿಟ್ಟಿನಲ್ಲಿ ಅವರಿಗೆ ಇನ್ಮುಂದೆ ಗುರುಮಠಕಲ್ ಕ್ಷೇತ್ರದಲ್ಲಿ ನೀರಾವರಿಗೆ ಹೆಚ್ಚಿನ ಆದ್ಯತೆ ನೀಡಿ ಸಾಧ್ಯವಾದಷ್ಟು ಬ್ರಿಜ್‌ಕಂ ಬ್ಯಾರೇಜ್ ನಿರ್ಮಿಸಿ ರೈತರಿಗೆ ನೀರಿನ ಅನುಕೂಲ ಮಾಡಲು ಆದ್ಯತೆ ನೀಡುತ್ತಿದ್ದೇನೆ ಎಂದು ಗುರುಮಠಕಲ್ ಮತಕ್ಷೇತ್ರದ ಶಾಸಕರಾದ ಶರಣಗೌಡ ಕಂದಕೂರ ಹೇಳಿದರು.
ಗುರುಮಠಕಲ್ ತಾಲೂಕಿನ ಜೈಗ್ರಾಂ ಗ್ರಾಮಲ್ಲಿ 2024-25 ನೇ ಸಾಲಿನ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಯೋಜನೆಯಡಿ ಜೈಗ್ರಾಮ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ೩ ಕೋಣೆಗಳ 50 ಲಕ್ಷ ರೂ. ವೆಚ್ಚದ ಕಾಮಗಾರಿ, ಗ್ರಾಮದಲ್ಲಿ 10 ಲಕ್ಷ ರೂ. ವೆಚ್ಚದ ಚರಂಡಿ ನಿರ್ಮಾಣ ಕಾಮಗಾರಿ, 20 ಲಕ್ಷ ರೂ. ವೆಚ್ಚದಲ್ಲಿ ಜೈಗ್ರಾಮ ಗ್ರಾಮದ ಮುಖ್ಯ ರಸ್ತೆಯಿಂದ ಶ್ರೀ ಹನುಮಾನ ದೇವಸ್ಥಾನದ ವರೆಗೆ ಸಿ.ಸಿ. ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿ ಹಾಗೂ 10 ಲಕ್ಷ ರೂ. ವೆಚ್ಚದಲ್ಲಿ ತೋರಣತಿಪ್ಪಾ ಗ್ರಾಮದ ಸಿ.ಸಿ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿ,15.81 ಲಕ್ಷ ವೆಚ್ಚದ ಸಂಕ್ಲಾಪೂರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ 1 ಕೋಣೆ ನಿರ್ಮಾಣ 30 ಲಕ್ಷ ರೂ. ವೆಚ್ಚದಲ್ಲಿ ವಂಕಸಂಬರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸಿ.ಸಿ. ರಸ್ತೆ ನಿರ್ಮಾಣ ಹಾಗೂ 53.55 ಲಕ್ಷಗಳಲ್ಲಿ ವಂಕಸಂಬರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಕ್ಷರ ಅವಿಷ್ಕಾರ ಅನುಷ್ಠಾನ ಸೇರಿದಂತೆ 15 ಲಕ್ಷ ರೂ. ವೆಚ್ಚದಲ್ಲಿ ಗುಂಜನೂರ ಮುರಾರ್ಜಿ ದೇಸಾಯಿ ವಸತಿ ಶಾಲೆಗೆ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ ಕಾಮಗಾರಿಗೆ ಅಡಿಗಲ್ಲು ನೆರವೇರಿಸಿ ಮಾತನಾಡಿದರು.
ಕ್ಷೇತ್ರದಲ್ಲಿ ರೈತರು ಅಭಿವೃದ್ಧಿಯಾಗ ಬೇಕು ಎನ್ನುವ ಕನಸಿದೆ. ಇದಕ್ಕಾಗಿ ನೀರಾವರಿಗೆ ಅನುಕೂಲವಾಗಲು ಬಿಡ್ಡ ಕಂ. ಬ್ಯಾರೇಜ್ ನಿರ್ಮಾಣ ಮಾಡಲಾಗುವುದು. ಈಗಾಗಲೇ ಈಡ್ಲೂರ ಬಳಿ ಬಿಡ್ಜ್ ಕಂ.ಬ್ಯಾರೇಶ್ ಕಾಮಗಾರಿ ಅಂತಿಮ ಹಂತಕ್ಕೆ ತಲುಪಿದೆ ಅದನ್ನು ಶೀಘ್ರವೇ ಉದ್ಘಾಟಿಸಲಾಗುದು ಎಂದರು.
ನಂದೇಪಲ್ಲಿಯಲ್ಲಿ ಬಿಡ್ಡ ಕಂ ಬ್ಯಾರೇಜ್ ನಿರ್ಮಾಣ ಮಾಡುವುದು ಈ ಭಾಗದ ರೈತರ ಬೇಡಿಕೆಯಾಗಿ ಅದನ್ನು ತ್ವರಿತಗತಿಯಲ್ಲಿ ಮಾಡಲು ಪ್ರಯತ್ನಿಸಲಾಗುವುದು, ಜೈಗಾಂ ಶಾಲೆಗೆ ಇನ್ನೂ 3 ಹೆಚ್ಚುವರಿ ಶಾಲೆ ಕೋಣೆ ನಿರ್ಮಾಣದ ಬೇಡಿಕೆಯಿದೆ. ಈ ಬಗ್ಗೆ ಶೀಘ್ರವೇ ಕ್ರಿಯಾಯೋಜನೆ ರೂಪಿಸಲು ಸೂಚಿಸಲಾಗುವುದು ಎಂದು ತಿಳಿಸಿದರು.
ಈ ವೇಳೆ ಜಿಲ್ಲಾಧ್ಯಕ್ಷ ಸುಭಾಶ್ಚಂದ್ರ ಕಟಕಟೆ, ರಾಮಮೋಹನರೆಡ್ಡಿ, ಮಲ್ಲಣ್ಣಗೌಡ ಜೈಗ್ರಾಂ. ವಿಜಯಕುಮಾರ ತೋರಣತಿಪ್ಪಾ, ಸಂಜೀವರಡ್ಡಿ ಜೈಗ್ರಾಂ, ರವಿಪಾಟೀಲ ಗುರುಮಠಕಲ್, ವಿರುಪಾಕ್ಷಿ ಕುಂಟಿಮರಿ, ವಿಜಯ ಈಡ್ಲೂರ, ಬಸಣ್ಣ ದೇವರಳ್ಳಿ, ಮೌಲಾನಸಾಬ ಗುಂಜನೂರ, ಚನ್ನಪ್ಪಗೌಡ ವಂಕಸಬ್ರ, ಮಲ್ಲಿಕಾರ್ಜುನ ಅರುಣಿ, ನರಸಪ್ಪ ಕವಡೆ, ಗೋಪಾಲ ಬೆಟ್ಟದಳ್ಳಿ ತಾಂಡಾ ಸೇರಿದಂತೆ ಇತರರಿದ್ದರು.
ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಮಾಡಬೇಡಿ :
ಗ್ರಾಮ ಪಂಚಾಯತ್ ಗಳಲ್ಲಿ ಲಭ್ಯವಿರುವ ಅನುದಾನ ಬಳಸಿ ಅಭಿವೃದ್ಧಿ ಮಾಡಿ, ಅನುದಾನ ಕಡಿಮೆಯಾದಲ್ಲಿ ನಮ್ಮ ಗಮನಕ್ಕೆ ತರಬೇಕು, ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಮಾಡಕೂಡದು, ನಾನು ಹೆಚ್ಚುವರಿ ಅನುದಾನ ನೀಡುತ್ತೇನೆ.
- ಶರಣಗೌಡ ಕಂದಕೂರ ಶಾಸಕರು, ಗುರುಮಠಕಲ್







