ಯಾದಗಿರಿ | ಜುಲೈ 3ರಂದು ಬೆಂಗಳೂರಿನಲ್ಲಿ ಜನಾಗ್ರಹ ಸಮಾವೇಶ: ಡಿಎಸ್‌ಎಸ್ ಕರೆ

ಹುಣಸಗಿ: ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ವಾದ) ರಾಜ್ಯ ಸಮಿತಿಯ ವತಿಯಿಂದ ಜುಲೈ 3ರಂದು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ದಲಿತ ಜನಾಗ್ರಹ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಸಂಘಟನಾ ಸಂಚಾಲಕ ರಾಮಣ್ಣ ಕಲ್ಲದೇವನಹಳ್ಳಿ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ಮಾತನಾಡಿ, ದಲಿತ ಸಮುದಾಯದ ಭೂಮಿ, ವಸತಿ, ಬ್ಯಾಕ್‌ಲಾಗ್ ಹುದ್ದೆಗಳ ಭರ್ತಿ, ಉದ್ಯೋಗ ನೇಮಕಾತಿ ಹಾಗೂ ವಿಶೇಷ ಘಟಕ ಯೋಜನೆ ಅನುಷ್ಠಾನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಸಮಾವೇಶದ ಮೂಲಕ ಸರ್ಕಾರದ ಗಮನ ಸೆಳೆಯಲಾಗುವುದು ಎಂದರು.
ದಲಿತ ಯುವ ಮುಖಂಡ ವಿರೇಶ ಗುಳಬಾಳ ಮಾತನಾಡಿ, ವಿಶೇಷ ಘಟಕ ಯೋಜನೆ (ಎಸ್‌ಸಿಪಿ) ಅನುದಾನವನ್ನು ನಿಯಮಬಾಹಿರವಾಗಿ ಬಳಕೆ ಮಾಡಲಾಗಿದೆ. ಅಲ್ಲದೆ ಸೆಕ್ಷನ್ 24 ಉಲ್ಲಂಘಿಸಿ ಸಾರಿಗೆ ಇಲಾಖೆ ಸಿಬ್ಬಂದಿಗಳ ವೇತನಕ್ಕಾಗಿ ಬಿಡುಗಡೆ ಮಾಡಿರುವ 200 ಕೋಟಿ ರೂಪಾಯಿಗೂ ಅಧಿಕ ಅನುದಾನವನ್ನು ಮರು ವಸೂಲಿ ಮಾಡಬೇಕು. ಈ ಹಣ ಬಿಡುಗಡೆಗೆ ಕಾರಣವಾದ ಆರ್ಥಿಕ ಇಲಾಖೆ ಅಧಿಕಾರಿಗಳನ್ನು ಅಮಾನತುಗೊಳಿಸಿ ಶಿಸ್ತು ಕ್ರಮ ಜರುಗಿಸಬೇಕೆಂಬ ಇತ್ಯಾದಿ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಲಾಗುತ್ತದೆ ಎಂದು ತಿಳಿಸಿದರು.
ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ ನೇತೃತ್ವದಲ್ಲಿ ನಡೆಯುವ ಜನಾಗ್ರಹ ಸಮಾವೇಶದಲ್ಲಿ ತಾಲೂಕಿನಿಂದ ಸಹಸ್ರಾರು ಸಂಖ್ಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.
ಈ ಸಂದರ್ಭ ಕಲಬುರ್ಗಿ ವಿಭಾಗ ಸಮಿತಿಯ ಮಾಳಪ್ಪ ಕಿರದಳ್ಳಿ ಹಾಗೂ ಪದಾಧಿಕಾರಿಗಳು ಇದ್ದರು.






