ಯಾದಗಿರಿ | ಆತ್ಮ ರಕ್ಷಣೆಗೆ ಕರಾಟೆ ಬಹಳ ಮುಖ್ಯ : ರಮಾಬಾಯಿ

ಯಾದಗಿರಿ : (ಸೈದಾಪುರ)ಮಹಿಳೆಯರ ಆತ್ಮ ರಕ್ಷಣೆಗೆ ಕರಾಟೆಯು ಬಹಳ ಮುಖ್ಯ ಎಂದು ಮುಖ್ಯಶಿಕ್ಷಕಿ ರಮಾಬಾಯಿ ಅಭಿಪ್ರಾಯಪಟ್ಟರು.
ಸಮೀಪದ ಮಲ್ಹಾರ ಗ್ರಾಮದ ಸರಕಾರಿ ಪ್ರೌಢ ಶಾಲೆಯ ಬಾಲಕಿಯರು ಹೈದರಾಬಾದ್ ನಲ್ಲಿ ನಡೆದ ರಾಷ್ಟ ಮಟ್ಟದ ಕರಾಟೆ ಚಾಂಪಿಯನ್ ಶಿಫ್ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಬಹುಮಾನಗಳಿಸಿದ ಹಿನ್ನಲೆಯಲ್ಲಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಅಭಿನಂದನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಆಪತ್ತಿನ ಸಮಯದಲ್ಲಿ ನಮ್ಮನ್ನು ನಾವು ಕಾಪಾಡಿಕೊಳ್ಳಲು ಇದೊಂದು ಕಲೆ ಅತ್ಯಂತ ಪ್ರಮುಖ ಪಾತ್ರವಹಿಸುತ್ತದೆ. ಅಂತಹ ಕಲೆಯನ್ನು ಕರಗತ ಮಾಡಿಕೊಂಡು ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ, ದ್ವಿತೀಯ, ತೃತೀಯ ಬಹುಮಾನಗಳಿಸಿ, ಶಾಲೆಯ ಕೀರ್ತಿಯನ್ನು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಇಂತಹ ಮತ್ತಷ್ಟು ಬಹುಮಾನಗಳು ಮುಡಿಗೇರಿಸಿಕೊಂಡು ತಂದೆ-ತಾಯಿಗಳಿಗೆ, ಗುರುಗಳಿಗೆ ಗೌರವನ್ನು ತಂದುಕೊಡಲಿ ಎಂದು ಶುಭ ಹಾರೈಸಿದರು.
ಈ ಸ್ಪರ್ಧೆಯಲ್ಲಿ ಭಾಗವಹಿಸಿದ 8ನೇ ತರಗತಿಯ ಭಾವನ, ಕವಿತಾ, ಸ್ಪಂದನಾ, ಚೈತ್ರಾ, 9ನೇ ಭಾಗ್ಯಶ್ರೀ, ಮರೆಮ್ಮ ಪ್ರಥಮ ಬಹುಮಾನಗಳಿಸಿದ್ದಾರೆ.
ರೂಬಿತಾ, ಶ್ರೀದೇವಿ ದ್ವಿತೀಯ, ದೇವಿಂದ್ರಮ್ಮ ತೃತೀಯ ಬಹುಮಾನಗಳಿಸಿ ಶಾಲೆಗೆ ಹಾಗೂ ಗ್ರಾಮಕ್ಕೆ ಕೀರ್ತಿ ತಂದಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಶಿಕ್ಷಕರಾದ ಶಿವಸಂಗಪ್ಪ, ಭೀಮರಾಯ, ಶಿವುಕುಮಾರ, ತಿಮ್ಮಣ್ಣ, ಸುಹಾಸ್ ಹಾಗೂ ವಿದ್ಯಾರ್ಥಿಗಳು ಸೇರಿದಂತೆ ಇತರರಿದ್ದರು.







