ಯಾದಗಿರಿ | ಜಿಲ್ಲೆಯ ಜ್ವಲಂತ ಸಮಸ್ಯೆಗಳ ಇತ್ಯರ್ಥಕ್ಕೆ ಕರವೇ ಹೋರಾಟಗಾರರು ಸಿದ್ದರಾಗಿ : ಟಿ.ಎನ್.ಭೀಮುನಾಯಕ ಕರೆ

ಯಾದಗಿರಿ : ಜಿಲ್ಲೆಯ ಪ್ರಮುಖ ಆರು ಜ್ವಲಂತ ಸಮಸ್ಯೆಗಳ ವಿರುದ್ಧ ಮಾಡು ಇಲ್ಲವೇ ಮಡಿ ಹೋರಾಟಕ್ಕೆ ಕರವೇ ಕಾರ್ಯಕರ್ತರು ಸನ್ನದ್ಧರಾಗಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾದ್ಯಕ್ಷ ಟಿ.ಎನ್.ಭೀಮುನಾಯಕ ಕರೆ ನೀಡಿದರು.
ನಗರದ ಕರವೇ ಕಾರ್ಯಾಲಯದಲ್ಲಿ ಶುಕ್ರವಾರ ಜರುಗಿದ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಮಟ್ಟದ ಪದಾಧಿಕಾರಿಗಳ ಹಾಗೂ ಆರು ತಾಲ್ಲೂಕುಗಳ ಅಧ್ಯಕ್ಷರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯ ಯಾದಗಿರಿ, ಸೈದಾಪೂರ ಹಾಗೂ ಲೋಕಸಭಾ ಕ್ಷೇತ್ರದ ರಾಯಚೂರು ರೈಲು ನಿಲ್ದಾಣಗಳನ್ನು ದೂರದ ವಿಶಾಖ ಪಟ್ಟಣ ವಲಯಕ್ಕೆ ಸೇರ್ಪಡೆ ಮಾಡುತ್ತಿರುವುದನ್ನು ಯಾವುದೇ ಕಾರಣಕ್ಕೂ ಮಾಡಲು ಬಿಡದಂತೆ ತಡೆಯುವುದು ಪ್ರಥಮಾದ್ಯತೆಯ ಹೋರಾಟವಾಗಬೇಕು ಎಂದು ಅವರು ಹೇಳಿದರು.
ಕಡೇಚೂರು ಬಾಡಿಯಾಲ ಕೈಗಾರಿಕೆ ಪ್ರದೇಶದಲ್ಲಿನ ವಿಷಪೂರಿತ ಕಾರ್ಖಾನೆಗಳನ್ನು ಸ್ಥಗಿತಗೊಳಿಸುವ ವರೆಗೆ ಹೋರಾಟ ನಡೆಸಬೇಕಿದೆ. ಅಲ್ಲಿನ ರೈತರು ವಿಷಗಾಳಿಗೆ ಈಡಾಗುತ್ತಿದ್ದಾರೆ ಇದನ್ನು ತಪ್ಪಿಸಬೇಕಿದೆ.
ರಾಷ್ಟ್ರಿಕೃತ ಬ್ಯಾಂಕುಗಳಲ್ಲಿ ಕಡ್ಡಾಯ ಕನ್ನಡ ಭಾಷಿಕರೇ ಕಾರ್ಯನಿರ್ವಹಿಸುವಂತಾಗಬೇಕು. ಅನ್ಯ ಭಾಷಿಕರಿಗೆ ಕಡ್ಡಾಯ ಕನ್ನಡ ಕಲಿಕೆ ಮಾಡುವಂತೆ ಒತ್ತಾಯಿಸಿ ಹೋರಾಟ ಈಗಾಗಲೇ ನಡೆದಿದೆ. ಮೈಲಾಪೂರ ಮೈಲಾರಲಿಂಗೇಶ್ವರ ದೇವಸ್ಥಾನ ಅಭಿವೃದ್ದಿಗೆ ಕ್ರಮ ಕೈಗೊಳ್ಳಬೇಕು, ಭಕ್ತರಿಂದ ಕೋಟ್ಯಂತರ ರೂ. ಬರುತ್ತಿದ್ದರೂ ಕನಿಷ್ಟ ಸೌಕರ್ಯ ಒದಗಿಸಲು ಸಹ ಆಡಳಿತ ಯತ್ನಿಸುತ್ತಿಲ್ಲದಿರುವುದು ನಾಚಿಕೆಗೇಡು. ಜನಪ್ರತಿನಿಧಿಗಳು, ಅಧಿಕಾರಿಗಳು ಈ ನಿಟ್ಟಿನಲ್ಲಿ ಚಿಂತನೆ ನಡೆಸದಿದ್ದರೆ ಹೋರಾಟ ಶತಸಿದ್ಧ ಎಂದು ಪ್ರಕಟಿಸಿದರು.
ಜಿಲ್ಲಾ ಕೇಂದ್ರದಲ್ಲಿ ಕೇವಲ ಒಂದೇ ದಿಕ್ಕಿನಲ್ಲಿ ಅಭಿವೃದ್ದಿ ಆಗುತ್ತಿದೆ. ಆದರೆ ಮುಂಬರುವ ದಿನಗಳಲ್ಲಿ ನಾಲ್ಕು ದಿಕ್ಕಿನಲ್ಲಿ ಸರಕಾರಿ ಕಚೇರಿಗಳು, ಎಂಜಿನಿಯರಿಂಗ್ ಕಾಲೇಜು ಮುಂತಾದ ಇನ್ನಿತರ ಸಂಸ್ಥೆಗಳನ್ನು ಸಮಪ್ರಮಾಣದಲ್ಲಿ ಅಭಿವೃದ್ಧಿ ಪಡಿಸಿದಲ್ಲಿ ಜನತೆಗೆ ಸರಳವಾಗಿ ಮನೆ ಬಾಗಿಲಿಗೆ ಅಧಿಕಾರ ತಂದುಕೊಟ್ಟಂತಾಗುತ್ತದೆ. ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳ, ಅಧಿಕಾರಿಗಳ ಚಳಿ ಬಿಡಿಸಲು ಹೋರಾಟ ಮಾಡಬೇಕಿದೆ.
ಇದಲ್ಲದೇ ಕೌಶಲ್ಯಾಭಿವೃದ್ಧಿ ವಿಶ್ವವಿದ್ಯಾಲಯ ಹಾಗೂ ಸರಕಾರಿ ಎಂಜಿನಿಯರಿಂಗ್ ಕಾಲೇಜು ಆರಂಭಿಸಬೇಕಿದೆ ಇದಕ್ಕೆ ಒತ್ತಡ ಹೇರಲು ಕರವೇ ಸೇನಾನಿಗಳು ಹೋರಾಟಕ್ಕೆ ಸಿದ್ಧರಾಗಬೇಕೆಂದು ಕರೆ ನೀಡಿದರು.
ನಾರಾಯಣಗೌಡರ ಆಗಮನ :
ಜ.20 ರಂದು “ಸುರಪುರ ಕರವೇ 20ರ ಸಂಭ್ರಮ” ಕಾರ್ಯಕ್ರಮಕ್ಕೆ ರಾಜ್ಯಾದ್ಯಕ್ಷರಾದ ಟಿ.ಎ.ನಾರಾಯಣಗೌಡರು ಸುರಪುರಕ್ಕೆ ಆಗಮಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಎಲ್ಲ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಅಂದು ಹಾಜರಿದ್ದು, ಅದ್ದೂರಿಯಾಗಿ ಸ್ವಾಗತಿಸಿ ಅವರ ಜೊತೆಗೆ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಪ್ರಕಾಶ ಪಾಟೀಲ್ ಜೈಗ್ರಾಮ್ ಇವರನ್ನು ಜಿಲ್ಲಾ ಉಪಾದ್ಯಕ್ಷರನ್ನಾಗಿ ನೇಮಕ ಮಾಡಲಾಯಿತು.
ಸಭೆಯಲ್ಲಿ ತಾಲ್ಲೂಕು ಅಧ್ಯಕ್ಷ ಮಲ್ಲು ಮಾಳಿಕೇರಿ, ಸಿದ್ದು ನಾಯಕ ಹತ್ತಿಕುಣಿ, ಹಣಮಂತ ಅಚ್ಚೋಲಾ, ಪಪ್ಪುಗೌಡ ಚಿನ್ನಾಕಾರ, ಅರ್ಜುನ ಪವಾರ್, ವಿಶ್ವರಾಜ ಹೊನಗೇರಾ, ಅಬ್ದುಲ್ ಚಿಗಾನೂg, ಶರಣಬಸಪ್ಪ ಯಲ್ಹೇರಿ, ಸಿದ್ದಪ್ಪ ಕುಯಿಲೂರ, ಭೀಮರಾಯ ರಾಮಸಮುದ್ರ, ಹುಲುಗಪ್ಪ ಭಜಂತ್ರಿ, ಹಣಮಂತ ತೇಕರಾಳ, ಶರಣು ಅಂಗಡಿ ಹುಣಸಗಿ, ಸಿದ್ದಲಿಂಗರಡ್ಡಿ ಮುನಗಾಲ, ಸುರೇಶ ಬೆಳಗುಂದಿ, ಯಲ್ಲಪ್ಪ ಚಾಮನಳ್ಳಿ, ಮೌನೇಶ ಮಾಧ್ವಾರ, ರವಿನಾಯಕ ಜಮಾರ, ಮರೆಪ್ಪ ಕಡ್ಡಿ, ಮಲ್ಲು ವಡಗೇರಿ ಸೇರಿದಂತೆ ಇನ್ನಿತರರು ಇದ್ದರು.







