Yadagiri | ಬರ ಘೋಷಣೆಗೆ ಆಗ್ರಹಿಸಿ ನಡೆಸಲು ಮುಂದಾಗಿದ್ದ ಕೆಕೆ ವಿಮೋಚನಾ ದಿನದ ಪ್ರತಿಭಟನೆ ಮುಂದೂಡಿಕೆ

ಯಾದಗಿರಿ: ಜಿಲ್ಲೆಯನ್ನು ಬರಪೀಡಿತ ಜಿಲ್ಲೆಯೆಂದು ಘೋಷಿಸುವಂತೆ ಒತ್ತಾಯಿಸಿ ಸೆ.17ರಂದು ಕಲ್ಯಾಣ ಕರ್ನಾಟಕ ವಿಮೋಚನಾ ದಿನದಂದು ಪ್ರತ್ಯೇಕ ಧ್ವಜ ಹಾರಿಸಿ ಪ್ರತಿಭಟನೆ ನಡೆಸಲು ಮುಂದಾಗಿದ್ದ ಸರ್ವ ಸಂಘಟನೆಗಳ ಹೋರಾಟ ಸಮಿತಿಯ ಹೋರಾಟವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ.
ಬುಧವಾರ ಸಂಜೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್ ಅವರು ಸಮಿತಿ ಪದಾಧಿಕಾರಿಗಳೊಂದಿಗೆ ತಮ್ಮ ಕಚೇರಿಯಲ್ಲಿ ಸಭೆ ನಡೆಸಿದರು. ಕೆಕೆ ವಿಮೋಚನಾ ದಿನದ ಕಾರ್ಯಕ್ರಮಕ್ಕೆ ಆಗಮಿಸಲಿರುವ ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಅವರನ್ನು ಸಮಿತಿ ಪದಾಧಿಕಾರಿಗಳಿಗೆ ಭೇಟಿ ಮಾಡಿಸಿ, ಬರ ಘೋಷಣೆ ಸೇರಿದಂತೆ ವಿವಿಧ ಬೇಡಿಕೆಗಳ ಕುರಿತು ಚರ್ಚಿಸಲು ಅವಕಾಶ ಕಲ್ಪಿಸುವುದಾಗಿ ಭರವಸೆ ನೀಡಿದರು.
ಈ ಹಿನ್ನೆಲೆಯಲ್ಲಿ ಗುರುವಾರ ನಿಗದಿಯಾಗಿದ್ದ ಪ್ರತಿಭಟನೆಯನ್ನು ಮುಂದೂಡಲಾಗಿದೆ ಎಂದು ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಜಲ್ಲಪ್ಪನೋರ್ ತಿಳಿಸಿದ್ದಾರೆ.
ಕಳೆದ ಹತ್ತು ದಿನಗಳ ಹಿಂದೆ ಜಿಲ್ಲೆಯನ್ನು ಬರಪೀಡಿತವೆಂದು ಘೋಷಿಸುವಂತೆ ಆಗ್ರಹಿಸಿ ಸರ್ವ ಸಂಘಟನೆಗಳ ಸಮಿತಿ ವತಿಯಿಂದ ಯಾದಗಿರಿ ಬಂದ್ ನಡೆಸಿ ಪ್ರತಿಭಟನೆ ಮಾಡಲಾಗಿತ್ತು. ಬಳಿಕ ಜಿಲ್ಲೆಗೆ ಆಗಮಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಿ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಲಾಗಿತ್ತು.
ಸೆ.16ರೊಳಗೆ ಜಿಲ್ಲೆಯನ್ನು ಬರಪೀಡಿತವೆಂದು ಘೋಷಿಸದಿದ್ದರೆ ಸೆ.17ರಂದು ಪ್ರತ್ಯೇಕ ಧ್ವಜ ಹಾರಿಸಿ ಹೋರಾಟ ನಡೆಸುವುದಾಗಿ ಸಮಿತಿ ಎಚ್ಚರಿಕೆ ನೀಡಿತ್ತು. ಆದರೆ, ಸೆ.16ರ ಸಂಜೆವರೆಗೂ ಸರ್ಕಾರದಿಂದ ಯಾವುದೇ ಸ್ಪಷ್ಟ ಮಾಹಿತಿ ಲಭ್ಯವಾಗದ ಹಿನ್ನೆಲೆಯಲ್ಲಿ ಹೋರಾಟಕ್ಕೆ ಸಜ್ಜಾಗಿತ್ತು.
ಈ ವಿಷಯ ತಿಳಿದ ಎಸ್‌ಪಿ ಪೃಥ್ವಿಕ್ ಶಂಕರ್ ಅವರು ಸಮಿತಿ ಪದಾಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಹೋರಾಟ ಕೈಬಿಡುವಂತೆ ಮನವಿ ಮಾಡಿದರು. ಆರಂಭದಲ್ಲಿ ಬೇಡಿಕೆ ಈಡೇರದ ಹಿನ್ನೆಲೆಯಲ್ಲಿ ನಿಗದಿಯಂತೆ ಹೋರಾಟ ನಡೆಸುವುದಾಗಿ ಸಮಿತಿ ತಿಳಿಸಿತ್ತು.
ಬಳಿಕ ಜಿಲ್ಲಾ ಉಸ್ತುವಾರಿ ಸಚಿವರನ್ನು ಭೇಟಿ ಮಾಡಿ ಬೇಡಿಕೆಗಳ ಕುರಿತು ಚರ್ಚಿಸಲು ಅವಕಾಶ ಕಲ್ಪಿಸುವುದಾಗಿ ಎಸ್‌ಪಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ಹೋರಾಟವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದು ಸಮಿತಿ ತಿಳಿಸಿದೆ.
ಸಭೆಯಲ್ಲಿ ಮಾರೆಪ್ಪ ನಾಯಕ, ಅಶೋಕ ಐಕೂರ, ಎಂ.ಡಿ. ತಾಜಾ, ಸೈದಪ್ಪ ಕೂಲುರಕರ್, ರಾಜಶೇಖರ ಎದುರುಮನಿ, ನಿಜಲಿಂಗಪ್ಪ ಪೂಜಾರಿ, ಸಿದ್ದು ಪಾಟೀಲ್ ತಂಗಡಗಿ, ಶಿವರಾಜ ದಾಸನಕೇರಿ, ರುದ್ರಾಂಭೀಕ ಪಾಟೀಲ್, ಅಜಯ ಮಾಸನ್, ಭೀಮು ಪೂಜಾರಿ, ವೀರೇಶ ಸಜ್ಜನ, ಬಸ್ಸುಗೌಡ ಚಟ್ಟನಳ್ಳಿ, ಶಂಕರ ಸೋನಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.






