ಯಾದಗಿರಿ | ಗಡಿಭಾಗಕ್ಕೆ ಅಂಟಿಕೊಂಡಿರುವ ನಸಲವಾಯಿ ಗ್ರಾಮಕ್ಕೆ ಡಿಸಿ, ಸಿಇಓ ಭೇಟಿ ನೀಡಲಿ : ಉಮೇಶ ಮುದ್ನಾಳ ಆಗ್ರಹ

ಸೈದಾಪೂರ : ಗುರುಮಠಕಲ್ ತಾಲೂಕಿನ ಗಡಿಭಾಗಕ್ಕೆ ಅಂಟಿಕೊಂಡಿರುವ ನಸಲವಾಯಿ ಗ್ರಾಮದಲ್ಲಿ ಒಳಚರಂಡಿಗಳು ತುಂಬಿರುವ ಪರಿಣಾಮ ದುರ್ವಾಸನೆ ಬೀರುತ್ತಿದ್ದು, ಗ್ರಾಮಸ್ಥರಿಗೆ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಶುರುವಾಗಿದೆ. ಒಳಚರಂಡಿ ನೀರು ದುರ್ವಾಸನೆ ಬೀರುತ್ತಿದ್ದರೂ ಕೂಡ ತೆರವುಗೊಳಿಸಲು ಮಾತ್ರ ಅಗತ್ಯವಾದ ಕ್ರಮಕೈಗೊಳ್ಳುತ್ತಿಲ್ಲ. ಹೀಗಾಗಿ ಗ್ರಾಮಸ್ಥರಿಗೆ ಈ ವಾಸನೆ ಸೇವಿಸುತ್ತಲೇ ಜೀವನ ನಡೆಸುವಂತಹ ಸ್ಥಿತಿ ಬಂದಿದ್ದು, ಅವರಿಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ ಎಂದು ಅಖಿಲ ಭಾರತೀಯ ಕೋಲಿ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ ಉಮೇಶ ಕೆ ಮುದ್ನಾಳ ಆರೋಪಿಸಿದ್ದಾರೆ
ನಿತ್ಯ ಮಕ್ಕಳು ಗ್ರಾಮದಲ್ಲಿರುವ ಸರಕಾರಿ ಶಾಲೆಳಿಗೆ ಈ ರಸ್ತೆ ಮೂಲಕವೇ ಹೋಗುತ್ತಿದ್ದಾರೆ. ಈ ರಸ್ತೆ ಪಕ್ಕದಲ್ಲಿಯೇ ಕಸಕಡ್ಡಿಗಳನ್ನು ಹಾಕಲಾಗಿದೆ. ಒಮ್ಮೊಮ್ಮೆ ನೀರು ರಸ್ತೆ ಮೇಲೆ ಕೂಡ ಹರಿದು ಪಕ್ಷಕ್ಕೆ ಬರುತ್ತಿದೆ. ಕಲುಷಿತ ನೀರಿನ ನಡುವೆ ಮಕ್ಕಳು ಸಾಕಷ್ಟು ಬಾರಿ ನಡೆದುಕೊಂಡು ಸಹ ಹೋಗಿದ್ದಾರೆ.
ಗ್ರಾಮದ ಆಂಜನೇಯ ದೇವಸ್ಥಾನದ ಸುತ ಮುತ್ತ ರಸ್ತೆ ಗಬ್ಬೆದ್ದು ನಾರುತ್ತಿದೆ, 'ಇದೇ ರಸ್ತೆಯ ಸಾರ್ವಜನಿಕರು ಮೂಗು ಮುಚ್ಚಿಕೊಂಡು ಓಡಾಡುತ್ತಿದ್ದಾರೆ. ಇಂತಹ ಪರಿಸ್ಥಿತಿ ನಿರ್ಮಾಣವಾದ ಹಿನ್ನೆಲೆ ಅವರಿಗೆ ಇದು ತೀವ್ರ ಕಿರಿಕಿರಿ ಉಂಟುಮಾಡಿದೆ ಆದ ಕಾರಣ ಗಡಿಭಾಗದ ಕು ಗ್ರಾಮಕ್ಕೆ ಡಿಸಿ, ಸಿಇಓ ಬೇಟಿ ನೀಡಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಉಮೇಶ ಮುದ್ನಾಳ ಎಚ್ಚರಿಸಿದ್ದಾರೆ.
ಗುರುಮಠಕಲ್ ತಾಲೂಕಿನ ನಸಲವಾಯಿ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರು, ಸಿ.ಸಿ. ರಸ್ತೆ ಮತ್ತು ಚರಂಡಿ ಇಲ್ಲದ ಕಾರಣ ಒಳಚರಂಡಿ ತುಂಬಿ ದುರ್ವಾಸನೆ ಹರಡುತ್ತಿದೆ. ಹಳ್ಳಿಗಳ ಅಭಿವೃದ್ಧಿಗೆ ಸರಕಾರ ಸಾಕಷ್ಟು ಅನುದಾನ ನೀಡುತ್ತದೆ. ಆದರೆ ಅದನ್ನು ಬಳಕೆ ಮಾಡಲು ಮಾತ್ರ ಸಂಪೂರ್ಣ ನಿರ್ಲಕ್ಷ್ಯ ಮಾಡಲಾಗುತ್ತಿದೆ. ಇದು ನಿಜಕ್ಕೂ ನಾಚಿಗೇಡಿನ ಸಂಗತಿಯಾಗಿದೆ ಎಂದು ಅಖಿಲ ಭಾರತೀಯ ಕೋಲಿ ಸಮಾಜ ರಾಜ್ಯ ಸಂಘಟನಾ ಕಾರ್ಯದರ್ಶಿ ಉಮೇಶ ಮುದ್ದಾಳ ಆಗ್ರಹಿಸಿದರು.
ಗ್ರಾಮದಲ್ಲಿ ಜನ ಜಾನುವಾರಗಳಿಗೆ ಸೊಳ್ಳೆಗಳ ಕಾಟ ಕೂಡ ವಿಪರೀತವಾಗಿದೆ. ಇವುಗಳ ನಿಯಂತ್ರಣಕ್ಕೆ ಯಾವುದೇ ಕ್ರಮಕೈಗೊಂಡಿಲ್ಲ. ಹೀಗೆ ಬಿಟ್ಟರೇ ಮುಂಬರುವ ದಿನಗಳಲ್ಲಿ ಜಿಪಂ ಕಚೇರಿ ಎದುರು ಪ್ರತಿಭಟನೆ ನಡೆಸುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.







