ಯಾದಗಿರಿ | ನೀಲಿ ಶಾಲಿನ ಕುರಿತ ಹೇಳಿಕೆಗೆ ಪ್ರತಾಪ್ ಸಿಂಹ ಕ್ಷಮೆಯಾಚಿಸಲಿ; ಶಿವಪುತ್ರ ಜವಳಿ

ಯಾದಗಿರಿ: ದಲಿತ ಸಂಘಟನೆಗಳ ಪ್ರತೀಕವಾಗಿರುವ ನೀಲಿ ಶಾಲಿನ ಬಗ್ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಹಗುರವಾಗಿ ನೀಡಿರುವ ಹೇಳಿಕೆಯನ್ನು ಕೂಡಲೇ ಅವರು ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಯಾದಗಿರಿ ಜಿಲ್ಲಾ ಸಂಚಾಲಕ ಶಿವಪುತ್ರ ಜವಳಿ ಒತ್ತಾಯಿಸಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಲಿತ ಸಂಘಟನೆಗಳು ಬೇರೆ ಬೇರೆ ಉದ್ದೇಶಕ್ಕೆ ನೀಲಿ ಶಾಲು ಧರಿಸಿಕೊಂಡು ಬರುತ್ತಾರೆ. ದಲಿತ ಸಂಘಟನೆಗಳಿಗೆ ಅಂಬೇಡ್ಕರ್ ಬಗ್ಗೆ 5 ಪೈಸೆ ತಿಳ್ಕೊಂಡಿಲ್ಲ. ಮೊದಲು ನೀವು ಅಂಬೇಡ್ಕರ್ ಅವರ ಬಗ್ಗೆ ಓದಿಕೊಳ್ಳಿ ಎಂದು ಪ್ರತಾಪ್ ಸಿಂಹ ಅವರು ನೀಡಿರುವ ಹೇಳಿಕೆ ದಲಿತ ಸಮುದಾಯದ ಭಾವನೆಗಳಿಗೆ ನೋವುಂಟು ಮಾಡುವಂತಿದೆ ಎಂದು ಹೇಳಿದರು.
ನೀಲಿ ಶಾಲು ಯಾವುದೇ ವ್ಯಕ್ತಿ ಅಥವಾ ರಾಜಕೀಯ ಪಕ್ಷ ನೀಡಿರುವುದಲ್ಲ. ಅದು ಡಾ. ಬಿ.ಆರ್. ಅಂಬೇಡ್ಕರ್ ಅವರ ವಿಚಾರಧಾರೆ, ಸಮಾನತೆ, ಸ್ವಾಭಿಮಾನ ಮತ್ತು ಸಾಮಾಜಿಕ ನ್ಯಾಯದ ಸಂಕೇತವಾಗಿ ದಲಿತ ಸಮುದಾಯದಲ್ಲಿ ಮಹತ್ವ ಪಡೆದಿದೆ. ಹೀಗಾಗಿ ನೀಲಿ ಶಾಲಿನ ಕುರಿತು ಮಾತನಾಡುವಾಗ ಅದರ ಐತಿಹಾಸಿಕ ಹಾಗೂ ಸಾಮಾಜಿಕ ಮಹತ್ವವನ್ನು ಅರಿತು ಮಾತನಾಡಬೇಕು ಎಂದು ಹೇಳಿದರು.
ನಂತರ ಮಾತನಾಡಿದ ಸಂಘಟನಾ ಸಂಚಾಲಕ ಚಂದಪ್ಪ ಮುನಿಯಪ್ಪನೋರ್, ದಲಿತ ಸಂಘರ್ಷ ಸಮಿತಿ ಸೇರಿದಂತೆ ವಿವಿಧ ದಲಿತ ಸಂಘಟನೆಗಳು ಹಲವು ವರ್ಷಗಳಿಂದ ಸಾಮಾಜಿಕ ಅನ್ಯಾಯದ ವಿರುದ್ಧ ಹೋರಾಟ ನಡೆಸುತ್ತಿವೆ. ಈ ಸಂಘಟನೆಗಳು ಹಾಗೂ ಅವುಗಳ ಸಂಕೇತಗಳ ಕುರಿತು ಅವಹೇಳನಕಾರಿ ರೀತಿಯಲ್ಲಿ ಮಾತನಾಡುವುದನ್ನು ದಲಿತ ಸಮುದಾಯ ಒಪ್ಪುವುದಿಲ್ಲ ಎಂದರು.
ಪ್ರತಾಪ್ ಸಿಂಹ ಅವರು ತಮ್ಮ ಹೇಳಿಕೆಗಳನ್ನು ಹಿಂಪಡೆದು, ದಲಿತ ಸಮುದಾಯ ಹಾಗೂ ನೀಲಿ ಶಾಲಿನ ಕುರಿತು ನೀಡಿರುವ ಹೇಳಿಕೆಗಳಿಗೆ ಮಾಧ್ಯಮಗಳ ಮೂಲಕ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ಅಕ್ಟೋಬರ್ 2ರಂದು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ದಲಿತ ಸಮುದಾಯದ ಸ್ವಾಭಿಮಾನಕ್ಕೆ ಧಕ್ಕೆ ತರುವಂತಹ ಹೇಳಿಕೆಗಳು ಮುಂದುವರಿಯಬಾರದು. ರಾಜಕೀಯ ಭಿನ್ನಾಭಿಪ್ರಾಯಗಳಿದ್ದರೂ ಯಾವುದೇ ಸಮುದಾಯದ ಭಾವನೆಗಳಿಗೆ ಧಕ್ಕೆ ತರುವ ರೀತಿಯಲ್ಲಿ ಮಾತುಗಳನ್ನು ಬಳಸಬಾರದು ಎಂದು ಹೇಳಿದರು.
ಪ್ರತಾಪ್ ಸಿಂಹ ಅವರು ತಮ್ಮ ಹೇಳಿಕೆ ಹಿಂಪಡೆದು, ದಲಿತ ಸಮುದಾಯ ಹಾಗೂ ನೀಲಿ ಶಾಲಿನ ಕುರಿತು ನೀಡಿರುವ ಹೇಳಿಕೆಗೆ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು. ಇಲ್ಲವಾದಲ್ಲಿ ಅಕ್ಟೋಬರ್ 2ರಂದು ಟಿ ನರಿಸೀಪುರದಲ್ಲಿ ದೊಡ್ಡ ಮಟ್ಟದ ಪ್ರತಿಭಟನೆ ನಡೆಸಲು ದಲಿತ ಸಂಘಟನೆಗಳಿಂದ ತಯಾರು ನಡೆದಿದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಶಿವಲಿಂಗಪ್ಪ ಹಸನಾಪುರ, ಮರೆಪ್ಪ ಕ್ರಾಂತಿ, ಭೀಮಣ್ಣ ಹುಣಸಗಿ, ಶರಭಣ್ಣ ದೋರನಹಳ್ಳಿ, ಮಹಮ್ಮದ್ ಪಟೇಲ್, ತಾಯಪ್ಪ ಭಂಡಾರಿ, ಸೇರಿದಂತೆ ಇತರರು ಇದ್ದರು.






