ಯಾದಗಿರಿ| ತಾಲೂಕು ಆಡಳಿತದ ವತಿಯಿಂದ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ

ಸುರಪುರ: ವಾಲ್ಮೀಕಿ ಅವರನ್ನು ಜ್ಞಾನದ ಸಂಕೇತ ಎಂದು ಕರೆಯಬೇಕು ಎಂದು ಕಲಬುರ್ಗಿಯ ಪ್ರಾಧ್ಯಾಪಕ ಅರುಣಕುಮಾರ ಜೋಳದ ಕೂಡ್ಲಿಗಿ ತಿಳಿಸಿದರು.
ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ತಾಲೂಕ ಆಡಳಿತದಿಂದ ಹಮ್ಮಿಕೊಂಡಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಭಾಗವಹಿಸಿ ಮಾತನಾಡಿದ ಅರುಣಕುಮಾರ ಜೋಳದ, ಎಸ್.ಸಿ ಮತ್ತು ಎಸ್ಟಿ ಸಮುದಾಯಗಳು ಒಂದಾಗುವುದು ತುಂಬಾ ಅಗತ್ಯವಾಗಿದೆ ಎಂದು ಹೇಳಿದರು.
ನಿವೃತ್ತ ಉಪನ್ಯಾಸಕ ವೇಣುಗೋಪಾಲ ನಾಯಕ ಜೇವರ್ಗಿ ಪ್ರಾಸ್ತಾವಿಕವಾಗಿ ಮಾತನಾಡಿ, ಮಹರ್ಷಿ ವಾಲ್ಮೀಕಿ ಅವರು ನೀಡಿದ ಸಂದೇಶ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ರಾಮಾಯಣ ಜಗತ್ತಿಗೆ ಕೊಟ್ಟಿರುವ ಸಂವಿಧಾನವಾಗಿದೆ. ವಾಲ್ಮೀಕಿ ಬ್ರಾಹ್ಮಣ ಎಂದು ಹೇಳಲಾಗುತ್ತಿದೆ. ಅವರು ಬುದ್ಧಿವಂತಿಕೆಯಿಂದ ಬ್ರಾಹ್ಮಣ, ಆದರೆ ಜನಿಸಿದ್ದು ಬೇಡರ ಸಮುದಾಯದಲ್ಲಿ. ಸ್ತ್ರೀಗೆ ಅಂದಿನ ಕಾಲದಲ್ಲಿಯೇ ಹೆಚ್ಚಿನ ಸ್ಥಾನ ನೀಡಿದವರು ವಾಲ್ಮೀಕಿಯಾಗಿದ್ದಾರೆ. ಸಮಾಜದಲ್ಲಿ ಎಲ್ಲರೂ ಹೆಣ್ಣಿಗೆ ಗೌರವ ನೀಡಬೇಕು ಎಂದು ತಿಳಿಸಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಹಶೀಲ್ದಾರ್ ಹುಸೇನ ಸಾಬ್ ಎ.ಸರಕಾವಸ್ ಮಾತನಾಡಿ, ಸಮಾಜದಲ್ಲಿ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು, ಸರಕಾರದ ಯೋಜನೆಗಳನ್ನು ತಲುಪಿಸುವ ಜೊತೆಗೆ ನಿವೇಶನ ರಹಿತರಿಗೆ ನಿವೇಶನ ನೀಡುವ ಯೋಜನೆ ಬಂದಿದ್ದು ಅದರ ಮೂಲಕ ಜನರಿಗೆ ಯೋಜನೆ ತಲುಪಿಸುವುದಾಗಿ ತಿಳಿಸಿದರು.
ವೇದಿಕೆಯಲ್ಲಿ ತಾ.ಪಂ ಇಓ ಬಸವರಾಜ ಸಜ್ಜನ್, ಟಿಹೆಚ್‌ಓ ಡಾ.ಆರ್.ವಿ ನಾಯಕ, ಪಿಐ ಉಮೇಶ ಎಂ ನಾಯಕ, ವಾಲ್ಮೀಕಿ ನಾಯಕ ಸಂಘದ ಅಧ್ಯಕ್ಷ ಭೀಮನಗೌಡ ಹೇಮನೂರ, ಸಮಾಜ ಕಲ್ಯಾಣ ಇಲಾಖೆ ಎ.ಡಿ ಮಹ್ಮದ್ ಸಲೀಂ,ಬಿಇಓ ನಿಂಗರಾಜ ಮೂಲಿಮನಿ,ನಗರಸಭೆ ಪೌರಾಯುಕ್ತ ಬಸವರಾಜ ಟಣಕೆದಾರ ಉಪಸ್ಥಿತರಿದ್ದರು.






