ಯಾದಗಿರಿ | ಉತ್ತಮ ಆಹಾರ ಸೇವನೆ, ವ್ಯಾಯಾಮದಿಂದ ಆರೋಗ್ಯ ಕಾಪಾಡಿಕೊಳ್ಳಿ : ನ್ಯಾ.ಬಿ.ಎಸ್.ರೇಖಾ

ಯಾದಗಿರಿ : ನಮ್ಮ ಆರೋಗ್ಯವನ್ನು ಆರೋಗ್ಯಕರವಾಗಿಟ್ಟುಕೊಳ್ಳಲು ಒಳ್ಳೆಯ ಆಹಾರ ಸೇವನೆ, ದಿನ ನಿತ್ಯ ವ್ಯಾಯಾಮ ಮಾಡುವುದು ಬಹುಮುಖ್ಯ ವಾಗಿದೆ ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಬಿ.ಎಸ್.ರೇಖಾ ಹೇಳಿದ್ದಾರೆ.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಯುಷ್ ಇಲಾಖೆ ಹಾಗೂ ಜಿಲ್ಲಾ ವಕೀಲರ ಸಂಘದ ಸಹಯೋಗದಲ್ಲಿ ನಗರದಲ್ಲಿ ರಾಷ್ಟ್ರೀಯ ಆಯುಷ್ ಅಭಿಯಾನದಡಿ "ಉಚಿತ ಆರೋಗ್ಯ ತಪಾಸಣಾ ಶಿಬಿರ" ಉದ್ಘಾಟಿಸಿ ಮಾತನಾಡಿದರು.
ನಾಗರಿಕರ ಅನುಕೂಲಕ್ಕಾಗಿ ಉಚಿತ ಆರೋಗ್ಯ ತಪಾಸಣೆ ಶಿಬಿರ ಏರ್ಪಡಿಸಿದ್ದು, ಎಲ್ಲರೂ ಇದರ ಇದರ ಸದುಪಯೋಗ ಪಡೆದುಕೊಳ್ಳಬೇಕು. ದಿನನಿತ್ಯ ನಾವು ಸೇವನೆ ಮಾಡುವ ಆಹಾರವು, ಶುದ್ಧವಾಗಿರಬೇಕು ಹಾಗೂ ಮಿತವಾಗಿ ಬಳಸಬೇಕು. ಬೇರೆ ಬೇರೆ ತರಕಾರಿ ಸೊಪ್ಪು ಬಳಸಬೇಕು. ನಾವು ಮಾಡುವಂತಹ ಕೆಲಸದ ಒತ್ತಡದಲ್ಲಿ ಸರಿಯಾದ ಸಮಯಕೆ ಊಟ ಮಾಡದೇ ಇದ್ದಲ್ಲಿ ದೇಹದಲ್ಲಿ ಬದಲಾವಣೆ, ಏರುಪೇರು ಆಗಿ ಅನಾರೋಗ್ಯಕ್ಕೆ ಒಳಗಾಗುತ್ತೇವೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಹಿರಿಯ ಸಿವಿಲ್ ಮರಿಯಪ್ಪ, ಆಯುಷ್ ವೈದ್ಯ ಪದ್ಧತಿಗಳು ರೋಗಿಯ ರೋಗವನ್ನು ನಿವಾರಿಸುವುದರ ಜೊತೆಗೆ ರೋಗಗಳು ಬರದಂತೆ ತಡೆಗಟ್ಟಲು ಅನೇಕ ಆರೋಗ್ಯ ಸೂತ್ರಗಳನ್ನು ನೀಡಿದೆ. ಇಂದಿಗೂ ನಮ್ಮ ದೇಶದಲ್ಲಿ ಬಹುತೇಕ ಜನರು ತಮ್ಮ ಆರೋಗ್ಯ ರಕ್ಷಣೆ ಮತ್ತು ಸಾಮಾನ್ಯ ರೋಗಗಳ ಪ್ರಾಥಮಿಕ ಚಿಕಿತ್ಸೆಗಾಗಿ ಸಾಂಪ್ರದಾಯಿಕ ವೈದ್ಯ ಪದ್ಧತಿಯನ್ನು ಅವಲಂಬಿಸುತ್ತಾರೆ. ಈ ಚಿಕಿತ್ಸೆಗಳಿಗಾಗಿ ತಮ್ಮ ಮನೆಯ ಸುತ್ತಮುತ್ತಲಿನ ಔಷದ ಸಸ್ಯಗಳು ಹಾಗೂ ಮನೆಯಲ್ಲಿನ ವಿವಿಧ ಬಗೆಯ ದ್ರವಗಳಿಂದ ತಮ್ಮ ಶಾರೀರಕ ಆರೋಗ್ಯ ಕಾಪಾಡಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಆಯುಷ್ ಅಧಿಕಾರಿಗಳಾದ ವಂದನಾ ಜೆ.ಗಾಳಿ, ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತಿತರರು ಉಪಸ್ಥಿತರಿದ್ದರು.







