ಯಾದಗಿರಿ | ಮೈಕ್ರೋ ಫೈನಾನ್ಸ್ ಲೇವಾದೇವಿದಾರರು ಸರಕಾರದ ನಿಯಮಗಳನ್ನು ಪಾಲಿಸಿ : ಡಿವೈಎಸ್ಪಿ ಜಾವೆದ್ ಇನಾಂದಾರ್

ಸುರಪುರ : ಮೈಕ್ರೋ ಫೈನಾನ್ಸ್ ಲೇವಾದೇವಿ ನಡೆಸುವವರು ಸರಕಾರದ ನಿಯಮಗಳನ್ನು ಪಾಲಿಸಬೇಕು ಎಂದು ಡಿವೈಎಸ್ಪಿ ಜಾವೆದ್ ಇನಾಂದಾರ್ ತಿಳಿಸಿದರು.
ನಗರದ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅನೇಕ ಕಡೆಗಳಲ್ಲಿ ಮೈಕ್ರೋ ಫೈನಾನ್ಸ್ ನವರು ಬಲವಂತದ ಸಾಲ ವಸೂಲಿ ಮಾಡುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಸರಕಾರ ರೂಪಿಸಿರುವ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು, ನಿಯಮ ಮೀರಿ ಬಲವಂತದ ಸಾಲ ವಸೂಲಿಗೆ ಮುಂದಾದಲ್ಲಿ ಅಂತಹ ಮೈಕ್ರೋ ಫೈನಾನ್ಸ್ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಇದೇ ಸಂದರ್ಭದಲ್ಲಿ ತಾಲೂಕಿನ ತಿಂಥಣಿ ಗ್ರಾಮದಲ್ಲಿನ ಜಗದ್ಗುರು ಮೌನೇಶ್ವರ ದೇವಸ್ಥಾನದ ಜಾತ್ರೆಯಲ್ಲಿ ಕೈಗೊಂಡಿರುವ ಬಂದೋಬಸ್ತ್ ಕುರಿತು ಮಾಹಿತಿ ನೀಡಿ, ಜಾತ್ರೆಯಲ್ಲಿ 7 ಕಡೆಗಳಲ್ಲಿ ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ವಾಹನಗಳು, ಬೈಕ್, ಎತ್ತಿನ ಬಂಡಿಗಳು ಬೇರೆ ಬೇರೆ ಕಡೆಗಳಲ್ಲಿ ಪಾರ್ಕಿಂಗ್ ಮಾಡಲು ವ್ಯವಸ್ಥೆ ಮಾಡಲಾಗಿದೆ ಎಂದರು.
ಅಲ್ಲದೆ ಶಾಂತಪುರ ಗ್ರಾಮದ ಕಡೆಯಲ್ಲಿನ ಕಮಾನ್ ಮೂಲಕ ದೇವಸ್ಥಾನಕ್ಕೆ ಬರುವುದು ಹಾಗೂ ದೇವಾಪುರ ಕಡೆಗೆ ಹೋಗುವ ಕಮಾನ್ ಮೂಲಕ ವಾಹನಗಳು ಹೊರಹೋಗಲು ವ್ಯವಸ್ಥೆ ಕಲ್ಪಿಸಲಾಗಿದೆ ಭಕ್ತಾದಿಗಳು ಪಾಲಿಸಬೇಕು ಎಂದು ತಿಳಿಸಿದರು.
ಅಲ್ಲದೆ ಜಾತ್ರೆಯಲ್ಲಿ 2 ಕೆಎಸ್ಆರ್ಪಿ, 200 ಜನ ಹೋಂ ಗಾರ್ಡ್ಗಳು, 5 ಡಿಆರ್ ತುಕಡಿ ಹಾಗೂ 150 ಜನ ಸಿವಿಲ್ ಪೊಲೀಸರನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಜಾತ್ರೆಗೆ ಬರುವವರು ಕಳ್ಳತನದ ಬಗ್ಗೆ ಎಚ್ಚರ ಮಹಿಸಬೇಕು ಎಂದು ಜನರಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಪಿಐ ಆನಂದ ವಾಗಮೊಡೆ ಉಪಸ್ಥಿತರಿದ್ದರು.







