ಯಾದಗಿರಿ | ಜಗತ್ತಿನಲ್ಲಿಯೇ ಅತ್ಯಂತ ಶ್ರೇಷ್ಠವಾದ ಸಂಸ್ಕೃತಿ ನಮ್ಮದು : ರಾಜಾ ಶ್ರೀಕೃಷ್ಣ ದೇವರಾಯ

ಸುರಪುರ: ಜಗತ್ತಿನಲ್ಲಿಯೇ ಅತ್ಯಂತ ಶ್ರೇಷ್ಠವಾದ ಸಂಸ್ಕೃತಿ ನಮ್ಮದು, ಆದರೆ ಇವತ್ತಿನ ದಿನಮಾನಗಳಲ್ಲಿ ನಮ್ಮ ಮಕ್ಕಳು ಹಾಗೂ ವಿಶೇಷವಾಗಿ ಯುವ ಪೀಳಿಗೆ ನಮ್ಮ ಪದ್ಧತಿ ಹಾಗೂ ಸಂಪ್ರದಾಯಗಳನ್ನ ಮರೆಯುತ್ತಿದ್ದು ಪಾಶ್ವಿಮಾತ್ಯ ಸಂಸ್ಕೃತಿಗೆ ಮಾರು ಹೋಗುತ್ತಿರುವುದು ಸರಿಯಲ್ಲ, ನಮ್ಮ ಸಂಸ್ಕೃತಿ ಹಾಗೂ ಸಂಪ್ರದಾಯವನ್ನು ಬಿಡಬಾರದು ಅದನ್ನು ಮುಂದುವರೆಸಿಕೊಂಡು ಹೋಗಬೇಕು ಎಂದು ವಿಜಯನಗರ ಸಾಮ್ರಾಜ್ಯದ ಆನೆಗೊಂದಿ ಸಂಸ್ಥಾನದ ರಾಜ ವಂಶಸ್ಥರಾದ ರಾಜಾ ಶ್ರೀಕೃಷ್ಣದೇವರಾಯ ನಾಯಕ ಹೇಳಿದರು.
ನಗರದ ದರಬಾರ ಆವರಣದಲ್ಲಿ ಹಮ್ಮಿಕೊಂಡಿದ್ದ ಸುರಪುರ ಸಂಸ್ಥಾನದ ನಾಲ್ವಡಿ ರಾಜಾ ವೆಂಕಟಪ್ಪ ನಾಯಕ ಹಾಗೂ ರಾಜಮಾತೆ ರಾಣಿ ಈಶ್ವರಮ್ಮ ಪ್ರಶಸ್ತಿ ಪ್ರದಾನ ಹಾಗೂ ಕೃತಿಗಳ ಲೋಕಾರ್ಪಣೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶಾಸಕ ರಾಜಾ ವೇಣುಗೋಪಾಲ ನಾಯಕ ಮಾತನಾಡಿ, ಮೊಘಲ್ ಸಾಮ್ರಾಟ್ ಔರಂಗಜೇಬನನ್ನು ಸೋಲಿಸಿದ ಹಾಗೂ ಬ್ರಿಟಿಷರ ವಿರುಧ ಹೋರಾಡಿದ ಕೀರ್ತಿ ಸುರಪುರ ಸಂಸ್ಥಾನಕ್ಕೆ ಸಲ್ಲುತ್ತದೆ. ತಿರುಪತಿ ತಿಮ್ಮಪ್ಪನ ಪರಮಭಕ್ತರಾಗಿದ್ದ ಸುರಪುರದ ಅರಸರಿಗೆ ವೆಂಕಟರಮಣ ಇಲ್ಲಿಯೇ ದರ್ಶನ ಕೊಟ್ಟಿದ್ದಾನೆ ಎಂದ ಅವರು, ವಿದೇಶದಲ್ಲಿ ಕೆಲಸ ಮಾಡುತ್ತಿರುವ ಭಾರತೀಯರು ಇಂದು ವಿದೇಶಗಳಲ್ಲಿ ನಮ್ಮ ದೇಶದ ಸಂಸ್ಕೃತಿ ಹಾಗೂ ಪರಂಪರೆಯನ್ನು ಎತ್ತಿ ಹಿಡಿಯುತ್ತಿದ್ದಾರೆ. ನಮ್ಮ ದೇಶದ ಪ್ರತಿಭೆ ನಮ್ಮಲ್ಲಿ ಉಳಿಯಬೇಕು, ಅಂದಾಗ ಮಾತ್ರ ನಮ್ಮ ಸಂಪತ್ತು ಮತ್ತಷ್ಟು ಹೆಚ್ಚಾಗುತ್ತದೆ ಎಂದರು.
ನಾಲ್ವಡಿ ರಾಜಾ ವೆಂಕಟಪ್ಪ ನಾಯಕ ಪ್ರಶಸ್ತಿ ಪುರಸ್ಕೃತ ಗುಲ್ಬರ್ಗಾ ವಿವಿ ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕ ಹೆಚ್. ಟಿ ಪೋತೆ ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗದಲ್ಲಿ ಸರಕಾರ ದಿಂದ ಒಂದೂ ಪ್ರತಿಷ್ಠಾನವಿಲ್ಲ, ಇಲ್ಲಿಯ ಎಲ್ಲಾ ಸಚಿವರು ಮತ್ತು ಶಾಸಕರು ಸರಕಾರಕ್ಕೆ ಒತ್ತಾಯಿಸಿ ಪ್ರತಿಷ್ಠಾನ ಆರಂಭಿಸಬೇಕು, ಸಚಿವರು ಶಾಸಕರು ಪ್ರತಿಷ್ಠಾನಕ್ಕೆ ಒತ್ತಾಯಿಸಿ ಆರಂಭಿಸಿದಲ್ಲಿ ನಮಗೆ ನೀಡುವ ಜವಬ್ದಾರಿಯನ್ನು ನಿಭಾಯಿಸಲು ಸಿದ್ಧರಿದ್ದೇವೆ. ಅಲ್ಲದೆ ಸುರಪುರ ಇತಿಹಾಸ ವಿವಿ ವಿದ್ಯಾರ್ಥಿಗಳ ಓದಿಗೆ ತುಂಬಾ ಮುಖ್ಯವಾಗಿದೆ. ಆದ್ದರಿಂದ ನಮ್ಮ ಕನ್ನಡ ಅಧ್ಯಯನ ಸಂಸ್ಥೆಯ ಸಭೆಯಲ್ಲಿ ರಾಣಿ ಈಶ್ವರಮ್ಮನವರ ಚರಿತ್ರೆ ವಿದ್ಯಾರ್ಥಿಗಳಿಗೆ ಪಾಠ ಮಾಡಲಾಗುವುದು, ಅಲ್ಲದೆ ಮುಂಬರುವ ದಿನಗಳಲ್ಲಿ ಬಿ.ಎಲ್ ವೇಣು ರಚಿಸಿರುವ ರಾಜಾ ಸುರಪುರದ ವೆಂಕಟಪ್ಪ ನಾಯಕ ಕಾದಂಬರಿ ಪಠ್ಯವಾಗಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮದ ಆರಂಭದಲ್ಲಿ ಸಾನಿಧ್ಯ ವಹಿಸಿದ್ದ ತಿರುಮಲ ತಿರುಪತಿ ದೇವಸ್ಥಾನದ ಸಲಹೆಗಾರರು ಹಾಗೂ ಪ್ರಧಾನ ಅರ್ಚಕರಾದ ಶ್ರೀಮಾನ್ ಅರ್ಚಕಂ ಪರಾಂಕುಶ ಸೀತಾರಾಮಾಚಾರ್ಯಲು ಅವರು ವೆಂಕಟೇಶ್ವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು. ಅನಂತ ಚಾರ್ಯಲು, ಶ್ರೀರಂಗ ಚಾರ್ಯಲು ಉಪಸ್ಥಿತರಿದ್ದರು.
ಲೋಕಾರ್ಪಣೆಗೊಂಡ ಕೃತಿಗಳಾದ ಸುರಪುರ ರಾಜಾ ವೆಂಕಟಪ್ಪ ನಾಯಕ ಕಾದಂಬರಿ ಕುರಿತು ಸಾಹಿತಿ ಸಿದ್ಧರಾಮ ಹೊನ್ಕಲ್, ಸುರಪುರ ಸಂಸ್ಥಾನ ಕೈಪಿಡಿ ಕುರಿತು ಡಾ.ಆರ್.ವಿ ಚಿಲುಮಿ ಧಾರವಾಡ ಹಾಗೂ ತಂದೆ ತಾಯಿ ಋಣ ಕೃತಿಯ ಕುರಿತು ಲಕ್ಷ್ಮಣ ಎಸ್. ಚೌರಿ ಮಾತನಾಡಿದರು. ಹಾಸ್ಯ ಕಲಾವಿದ ಬಸವರಾಜ ಮಹಾಮನಿ ಹಾಸ್ಯ ಭಾಷಣ ಮಾಡಿದರು.
ಕಾರ್ಯಕ್ರಮದಲ್ಲಿ ರಾಜಾ ವಾಸುದೇವ ನಾಯಕ, ರಾಜಾ ಲಕ್ಷ್ಮೀನಾರಾಯಣ ನಾಯಕ,ರಾಜಾ ಪಿಡ್ಡನಾಯಕ, ರಾಜಾ ಎಸ್. ಶ್ರೀನಿವಾಸ ನಾಯಕ,ರಾಜಾ ಚೆನ್ನಪ್ಪ ನಾಯಕ,ರಾಜಾ ಎಸ್. ಚಿರಂಜೀವಿ ನಾಯಕ,ರಾಜಾ ಎಸ್. ಮಂಜುನಾಥ ನಾಯಕ, ಡಾ.ಉಪೇಂದ್ರ ನಾಯಕ ಸುಬೇದಾರ ಉಪಸ್ಥಿತರಿದ್ದರು. ನಿವೃತ್ತ ಪ್ರಧಾನ ಗುರು ಶಿವಕುಮಾರ ಮಸ್ಕಿ, ಪಿ.ವಿಯರಾಘನ್ ಹಾಗೂ ಸಾಹಿತಿ ಜಾವೀದ್ ಹುಸೇನ್ ಹವಲ್ದಾರ್ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿ ವಂದಿಸಿದರು.
ಗೌರವ ಪ್ರಶಸ್ತಿಯನ್ನು ತಿರುಮಲ ತಿರುಪತಿ ದೇವಸ್ಥಾನದ ಸಲಹೆಗಾರರು ಹಾಗೂ ಪ್ರಧಾನ ಅರ್ಚಕರಾದ ಶೀಮಾನ್ ಅರ್ಚಕಂ ಪರಾಂಕುಶ ಸೀತಾರಾಮಾಚಾರ್ಯಲು, ಗುಲಬರ್ಗ ವಿವಿ ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕ ಡಾ. ಹೆಚ್.ಟಿ ಪೋತೆ, ಸಂಸ್ಕೃತ ಸಾಹಿತ್ಯ ಕ್ಷೇತ್ರದ ಡಾ.ಲಕ್ಷ್ಮೀಕಾಂತ ಮೋಹರೀರ ಸಂಸ್ಕೃತ ವಿದ್ವಾಂಸರ ಕಲಬುರ್ಗಿ ಇವರುಗಳಿಗೆ ನೀಡಲಾಯಿತು. ರಾಜಾ ನಾಲ್ವಡಿ ವೆಂಕಟಪ್ಪ ನಾಯಕ ಪ್ರಶಸ್ತಿಯನ್ನು ವಿವಿಧ ಕ್ಷೇತ್ರಗಳ ಸಾಧಕರಾದ ಪಿ.ಶ್ಯಾಮಸುಂದರ್, ಶ್ರೀನಿವಾಸ ಜಾಲವಾದಿ, ಭೀಮಣ್ಣ ಬೋನಾಳ,ಅಶೋಕ ಸಾಲವಾಡಗಿ, ಡಾ.ರಮೇಶ ನಾಯಕ, ಮಹಿಪಾಲರಡ್ಡಿ ಮುನ್ನೂರು, ಪ್ರಶಾಂತ ಪಿ.ಆಸ್ಕ್ ಮೈಸೂರು, ಶಿವರಾಜ ಶಾಸ್ತ್ರೀಧರ್ಮೇಂದ್ರ ಕುಮಾರ ಆರೇನಹಳ್ಳಿ, ಡಾ.ಎಮ್.ಎಸ್.ಶಿರವಾಳ, ಜೆ.ಯೋಗನಾಂದ ಜೋಗಿನಹಟ್ಟಿ ಹಾಗೂ ಶಕೀಲ್ ಐ.ಎಸ್ ಅವರಿಗೆ ನೀಡಲಾಯಿತು. ರಾಜಮಾತೆ ರಾಣಿ ಈಶ್ವರಮ್ಮ ಪ್ರಶಸ್ತಿಯನ್ನು ಸಾಹಿತ್ಯ ಕ್ಷೇತ್ರದ ಡಾ.ಶೈಜಾ ಎನ್.ಬಾಗೇವಾಡಿ, ಡಾ.ಪರವಿನ್ ಸುಲ್ತಾನಾ ಅವರಿಗೆ ನೀಡಿ ಗೌರವಿಸಲಾಯಿತು.
ಗರುಡಾದ್ರಿ ಚಿತ್ರ ಕಲಾವಿದ ಡಾ.ವಿಜಯ ಹಾಗರಗುಂಡಗಿ, ಸುರಪುರ ಪಂಚಾಂಗ ಕರ್ತ ಕೇದಾರನಾಥ ಶಾಸ್ತ್ರೀ ನ್ಯಾಯಂಗ ಇಲಾಖೆ ಕಲಬುರಗಿಯ ರಾಮು ನಾಯಕ ಸುಬೇದಾರ, ಕಲಬುರ್ಗಿ ಪಿ.ಡಿ.ಎಸ್.ಎಸ್.ಸ್ಕೂಲ್ ಆಫ್ ಆರ್ಟಿಟೆಕ್ಟರ್‌ನ ವಿಜಯಲಕ್ಷ್ಮೀ ಕೆ.ಬಿರಾದಾರ ಹಾಗೂ ಶಶಿಕಲಾ ಮಾಮಾ ಅವರನ್ನು ವಿಶೇಷವಾಗಿ ಸನ್ಮಾನಿಸಿ ಗೌರವಿಸಲಾಯಿತು.







