ಯಾದಗಿರಿ | 13ನೇ ಅಖಿಲ ಭಾರತ ಶರಣ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಳ್ಳುವಂತೆ ಪ್ರಕಾಶ ಅಂಗಡಿ ಮನವಿ

ಯಾದಗಿರಿ/ ಸುರಪುರ : ಚಿತ್ರದುರ್ಗದ ಮುರುಘರಾಜೇಂದ್ರ ಬೃಹನ್ಮಠದಲ್ಲಿ ಡಾ.ಸಿದ್ದರಾಮ ಬೆಲ್ದಾಳ ಶರಣರ ಸಮ್ಮೆಳನಾಧ್ಯಕ್ಷತೆಯಲ್ಲಿ ಜ.18 ಮತ್ತು 19ರ ಎರಡು ದಿನಗಳ ಕಾಲ ನಡೆಯಲಿರುವ 13 ನೇ ಅಖಿಲ ಭಾರತ ಶರಣ ಸಾಹಿತ್ಯ ಸಮ್ಮೇಳನದಲ್ಲಿ ಯುವ ಘಟಕದ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಶರಣ ಸಾಹಿತ್ಯ ಪರಿಷತ್ತಿನ ಕೇಂದ್ರ ಸಮಿತಿ ಯುವ ಪ್ರತಿನಿಧಿ ಪ್ರಕಾಶ ಅಂಗಡಿ ಕನ್ನೆಳ್ಳಿ ಮನವಿ ಮಾಡಿದ್ದಾರೆ.
ಈ ಕುರಿತು ಪತ್ರಿಕೆ ಪ್ರಕಟಣೆ ನೀಡಿರುವ ಅವರು, ಚಿತ್ರದುರ್ಗದ ಸಮ್ಮೇಳನದಲ್ಲಿ ಜಗದ್ಗುರು ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮಿಗಳ, ಡಂಬಳ-ಗದಗನ ತೋಂಟದರ್ಯ ಸಂಸ್ಥಾನಮಠದ ಡಾ.ತೋಂಟದ ಸಿದ್ದರಾಮ ಸ್ವಾಮಿಗಳ ಹಾಗೂ ನಾಡಿನ ಹೆಸರಾಂತ ವಿವಿಧ ಮಠಗಳ ಸಾನಿಧ್ಯದಲ್ಲಿ ನಡೆಯುವ ಈ ಸಮ್ಮೇಳನವನ್ನು ಜ.18 ರಂದು ಬೆಳಗ್ಗೆ 11ಕ್ಕೆ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಉದ್ಘಾಟಿಸಲಿದ್ದಾರೆ.
ಪರಿಷತ್ತಿನ ಅಧ್ಯಕ್ಷರಾದ ಡಾ.ಸಿ.ಸೋಮಶೇಖರ ಹಾಗೂ ಸಚಿವರು, ಶಾಸಕರು, ಸಾಹಿತಿಗಳು, ಕಲಾವಿದರು, ಸಂಗೀತಗಾರರು ಸೇರಿದಂತೆಯೇ ಪರಿಷತ್ತಿನ ಪದಾಧಿಕಾರಿಗಳು ಮತ್ತು ಸದಸ್ಯರು ಭಾಗವಹಿಸಲಿದ್ದು, ಎರಡು ದಿನಗಳಲ್ಲಿ ಏಳು ಚಿಂತನಗೋಷ್ಠಿಗಳು, ಸಾಂಸ್ಕೃತಿಕ ಕಾರ್ಯಕ್ರಮ, ವಚನ ಗಮಕ ಸೌರಭ, ಸಮ್ಮೇಳನ್ಯಾಕ್ಷರೊಂದಿಗೆ ಸಂವಾದ, ಬಹಿರಂಗ ಅಧಿವೇಶನ, ಸನ್ಮಾನ ಹಾಗೂ ಜ.19ರಂದು ಸಂಜೆ 6ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ. ಕೇಂದ್ರ ಸಚಿವ ವಿ.ಸೋಮಣ್ಣ, ಮಾಜಿ ಸಿ.ಎಂ ಬಸವರಾಜ ಬೊಮ್ಮಾಯಿ, ವಿಶ್ರಾಂತ ನ್ಯಾಯಮೂರ್ತಿ ಡಾ.ಶಿವರಾಜ್ ಪಾಟೀಲ್, ಡಾ.ಎಂ.ಪ್ರಭಾಕರ ಕೋರೆ ಇತರರು ಭಾಗವಹಿಸಲಿದ್ದಾರೆ.
ಈ ಎರಡು ದಿನಗಳ ಸಮ್ಮೇಳನದಲ್ಲಿ ಹೆಚ್ಚಾಗಿ ಯುವಕರಿಗೆ ಉಪಯುಕ್ತವಾದ ಗೋಷ್ಠಿಗಳು ಆಯೋಜಿಸಲಾಗಿದ್ದು, ಶರಣ ಸಾಹಿತ್ಯ ಪರಿಷತ್ತಿನ ಎಲ್ಲಾ ಜಿಲ್ಲೆಯ ಯುವ ಘಟಕದ ಪದಾಧಿಕಾರಿಗಳು ಜಿಲ್ಲಾ ತಾಲೂಕಿನ ಸದಸ್ಯರುಗಳು ಸೇರಿದಂತೆ ಅತಿ ಹೆಚ್ಚಿನ ಯುವಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿ ಶರಣ ಸಂಸ್ಕೃತಿ ಶರಣ ಸಾಹಿತ್ಯ ವಚನ ಚಿಂತನೆ ವೈಚಾರಿಕ ಉಪನ್ಯಾಸ ಮಾಲಿಕೆಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಪ್ರಕಾಶ ಅಂಗಡಿ ಮನವಿ ಮಾಡಿದ್ದಾರೆ.







