Yadagiri | ಯೀಮ್ಸ್‌ನಲ್ಲಿ ಗುಣಮಟ್ಟದ ವೈದ್ಯಕೀಯ ಶಿಕ್ಷಣ, ಚಿಕಿತ್ಸೆಗೆ ಆದ್ಯತೆ : ಸಂದೀಪ್ ಪಾಟೀಲ್

ಯಾದಗಿರಿ: ತಮ್ಮ ಎರಡು ವರ್ಷದ ಅಧಿಕಾರಾವಧಿಯಲ್ಲಿ ಯಾದಗಿರಿ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಗುಣಮಟ್ಟದ ವೈದ್ಯಕೀಯ ಶಿಕ್ಷಣ ಹಾಗೂ ಯೀಮ್ಸ್ ಆಸ್ಪತ್ರೆಗೆ ಬರುವ ರೋಗಿಗಳಿಗೆ ಉತ್ತಮ ಚಿಕಿತ್ಸೆ ಒದಗಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಯೀಮ್ಸ್ ನಿರ್ದೇಶಕ ಡಾ. ಸಂದೀಪ್ ಪಾಟೀಲ್ ಹೇಳಿದರು.
ಮೆಡಿಕಲ್ ಕಾಲೇಜು ಸಭಾಂಗಣದಲ್ಲಿ ಬೆಂಗಳೂರಿನ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಮೌಲ್ಯಮಾಪನ ವಿಭಾಗದ ರಿಜಿಸ್ಟ್ರಾರ್ ಹುದ್ದೆಗೆ ಪದೋನ್ನತಿ ಹೊಂದಿದ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಮೆಡಿಕಲ್ ಕಾಲೇಜಿನಲ್ಲಿ ಪ್ರಸ್ತುತ 150 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ವಿದ್ಯಾರ್ಥಿಗಳ ಸಂಖ್ಯೆಯನ್ನು 200ಕ್ಕೆ ಹೆಚ್ಚಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಜೊತೆಗೆ ಸ್ನಾತಕೋತ್ತರ (ಪಿಜಿ) ವೈದ್ಯಕೀಯ ಕೋರ್ಸ್‌ಗಳನ್ನು ಆರಂಭಿಸಲು ಮನವಿ ಮಾಡಲಾಗಿದ್ದು, ಶೀಘ್ರದಲ್ಲೇ ಅನುಮತಿ ದೊರೆಯುವ ನಿರೀಕ್ಷೆಯಿದೆ ಎಂದು ತಿಳಿಸಿದರು.
ಸ್ಥಳೀಯನಾಗಿ ಜಿಲ್ಲೆಯ ಆರೋಗ್ಯ ಕ್ಷೇತ್ರದಲ್ಲಿ ಸುಧಾರಣೆ ತರಲು ವಿಶೇಷ ಗಮನ ನೀಡಿದ್ದೇನೆ. ಯೀಮ್ಸ್ ಆಸ್ಪತ್ರೆಯಲ್ಲಿ ಅಪಘಾತ ಮತ್ತು ತುರ್ತು ಚಿಕಿತ್ಸಾ ಘಟಕವನ್ನು ಬಲಪಡಿಸಲಾಗಿದೆ. ಕ್ಷಯರೋಗಿಗಳಿಗೆ ಪ್ರತ್ಯೇಕ ಚಿಕಿತ್ಸಾ ವಿಭಾಗ ಆರಂಭಿಸಲಾಗಿದ್ದು, ನರ್ಸಿಂಗ್ ಕಾಲೇಜು ನಿರ್ಮಾಣ ಕಾಮಗಾರಿಯೂ ಪ್ರಗತಿಯಲ್ಲಿದೆ ಎಂದು ಹೇಳಿದರು.
ವಿದ್ಯಾರ್ಥಿಗಳಿಗೆ ಉತ್ತಮ ಶೈಕ್ಷಣಿಕ ವಾತಾವರಣ ಕಲ್ಪಿಸಿರುವ ಪರಿಣಾಮ ಕಾಲೇಜು ಪ್ರತಿವರ್ಷ ಉತ್ತಮ ಫಲಿತಾಂಶ ದಾಖಲಿಸುತ್ತಿದೆ. ಮುಂದಿನ ದಿನಗಳಲ್ಲಿ ಈ ಸಾಧನೆ ಇನ್ನಷ್ಟು ಉತ್ತಮವಾಗಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಜಿಲ್ಲೆಯ ಹೆಣ್ಣುಮಕ್ಕಳ ಹೆರಿಗೆ ಆಸ್ಪತ್ರೆಗೆ ತಜ್ಞ ವೈದ್ಯರು ಮತ್ತು ಸಿಬ್ಬಂದಿಯನ್ನು ನೇಮಕ ಮಾಡಿರುವುದರಿಂದ ಗ್ರಾಮೀಣ ಭಾಗದ ಬಡ ಕುಟುಂಬಗಳಿಗೆ ಉತ್ತಮ ಆರೋಗ್ಯ ಸೇವೆ ದೊರೆಯುತ್ತಿದೆ. ಯೀಮ್ಸ್ ಅಧೀನದಲ್ಲಿರುವ ಆಸ್ಪತ್ರೆಯಲ್ಲಿ ಹಲವು ಹೊಸ ವಿಭಾಗಗಳನ್ನು ಆರಂಭಿಸಲಾಗಿದ್ದು, ಎಂಆರ್‌ಐ ಸ್ಕ್ಯಾನಿಂಗ್ ಯಂತ್ರ ಶೀಘ್ರದಲ್ಲೇ ಕಾರ್ಯಾರಂಭ ಮಾಡಲಿದೆ. ರಕ್ತ ಘಟಕ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಶಸ್ತ್ರಚಿಕಿತ್ಸಾ ವಿಭಾಗಕ್ಕೆ ಲ್ಯಾಪ್ರೋಸ್ಕೋಪಿ ಉಪಕರಣವೂ ಲಭ್ಯವಾಗಲಿದೆ ಎಂದು ಮಾಹಿತಿ ನೀಡಿದರು.
ಈ ವೇಳೆ ಯೀಮ್ಸ್‌ನ ನೂತನ ನಿರ್ದೇಶಕರಾಗಿ ಅಧಿಕಾರ ಸ್ವೀಕರಿಸಿದ ಡಾ. ಶಿವಕುಮಾರ್ ಮಾತನಾಡಿ, ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗೆ ಹೊಸ ಕಾಯಕಲ್ಪ ನೀಡುವ ಸಂಕಲ್ಪ ಹೊಂದಿದ್ದು, ಪಾರದರ್ಶಕ ಆಡಳಿತದ ಮೂಲಕ ಸಾರ್ವಜನಿಕರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸಲು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವುದಾಗಿ ಹೇಳಿದರು.
ಕಾರ್ಯಕ್ರಮದಲ್ಲಿ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲ ಡಾ. ನವಾಜ್ ಉಮರ್, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಮಹೇಶ್ ಬಿರಾದಾರ, ಡಾ. ರಿಜ್ವಾನಾ ಅಫ್ರೀನ್, ಡಾ. ಸಂತೋಷ ಲಕ್ಷ್ಮಣ ಸೇರಿದಂತೆ ಹಲವು ವೈದ್ಯರು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.






