ಯಾದಗಿರಿ | ಬಸವಣ್ಣನ ಮೂರ್ತಿಗೆ ಅಪಮಾನ ಖಂಡಿಸಿ ಅಂಬೇಡ್ಕರ್ ವಾದದಿಂದ ಪ್ರತಿಭಟನೆ
ಕಿಡಿಗೇಡಿಗಳನ್ನು ಗಡಿಪಾರು ಮಾಡದಿದ್ದಲ್ಲಿ ರಾಜ್ಯಾದ್ಯಂತ ಹೋರಾಟ : ಮಾಳಪ್ಪ ಕಿರದಳ್ಳಿ

ಸುರಪುರ : ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ದಾಡಗಿ ಕ್ರಾಸ್ ಬಳಿ ಮಂಗಳವಾರ ರಾತ್ರಿ ವಿಶ್ವಗುರು ಬಸವಣ್ಣನವರ ಮೂರ್ತಿ ಭಗ್ನಗೊಳಿಸಿದ ಕಿಡಿಗೇಡಿಗಳನ್ನು ಬಂಧಿಸಿ ಗಡಿಪಾರು ಮಾಡಬೇಕು, ಇಲ್ಲವಾದಲ್ಲಿ ನಮ್ಮ ರಾಜ್ಯ ಸಂಚಾಲಕರಾದ ಮಾವಳ್ಳಿ ಶಂಕರ ಅವರ ನೇತೃತ್ವದಲ್ಲಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಸಂಘಟನೆ ಜಿಲ್ಲಾ ಸಂಚಾಲಕ ಮಾಳಪ್ಪ ಕಿರದಳ್ಳಿ ಆಕ್ರೋಶ ವ್ಯಕ್ತಪಡಿಸಿದರು.
ನಗರದ ತಹಶೀಲ್ದಾರ್ ಕಚೇರಿ ಮುಂದೆ ಹಮ್ಮಿಕೊಂಡಿದ್ದ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದ ಅವರು, ಬಸವಣ್ಣನವರು ಎಲ್ಲ ಸಮುದಾಯಗಳ ಏಳಿಗೆಗಾಗಿ ಹಾಗೂ ಸಮಾನತೆಗಾಗಿ ಹೋರಾಟ ಮಾಡಿದ ಕ್ರಾಂತಿಪುರುಷ, ಅವರನ್ನು ಇಂದು ವಿಶ್ವವೇ ಗೌರವಿಸುತ್ತದೆ, ಆದರೆ ಬಸವಣ್ಣನವರ ನೆಲದಲ್ಲಿಯೇ ಅವರ ಮೂರ್ತಿ ಭಗ್ನಗೊಳಿಸುವ ಮೂಲಕ ವಿಕೃತಿ ಮೆರೆದಿರುವ ಕಿಡಿಗೇಡಿಗಳ ಕೃತ್ಯವನ್ನು ಖಂಡಿಸುತ್ತೇವೆ ಮತ್ತು ಸರಕಾರ ಕೂಡಲೇ ಅವರನ್ನು ಬಂಧಿಸಿ ಗಡಿಪಾರು ಮಾಡಬೇಕು ಎಂದರು.
ನಂತರ ಮುಖ್ಯಮಂತ್ರಿಗಳಿಗೆ ಬರೆದ ಮನವಿಯನ್ನು ತಹಶೀಲ್ದಾರ್ ಕಚೇರಿ ಸಿರಸ್ತೆದಾರ ಮೂಲಕ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ತಾಲೂಕು ಸಂಚಾಲಕ ಶರಣಪ್ಪ ತಳವಾರಗೇರ, ತಾಲೂಕು ಸಂಘಟನಾ ಸಂಚಾಲಕರಾದ ಮಲ್ಲಿಕಾರ್ಜುನ ಹಾದಿಮನಿ, ಬಸವರಾಜ ಎಂಟಮನಿ ಬೋನ್ಹಾಳ, ನ್ಯಾಯವಾದಿ ಪರಶುರಾಮ ಸಾಸನೂರ,ವಿಕ್ರಂ ಕರಡಕಲ್, ಲಾಲು ಚವ್ಹಾಣ, ಕೃಷ್ಣಾ ಕಿರದಳ್ಳಿ, ಸಾಹೆಬಗೌಡ ವಾಗಣಗೇರ, ಕೆಂಚಪ್ಪ ಕಟ್ಟಿಮನಿ, ಹಣಮಂತ ಕಟ್ಟಿಗೌಡ, ಯಲ್ಲಪ್ಪ ಹಾಲಗೇರ, ಮರೆಪ್ಪ ಕಟ್ಟಿಮನಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.







