ಯಾದಗಿರಿ | ಜೆಸ್ಕಾಂ ಕಚೇರಿ ಮುಂದೆ ರಾಜ್ಯ ರೈತ ಸಂಘದಿಂದ ಪ್ರತಿಭಟನೆ

ಸುರಪುರ: ರಾಜ್ಯದಲ್ಲಿ ವಿದ್ಯುತ್ ಖಾಸಗೀಕರಣ ಮಾಡುವ ಮೂಲಕ ಸರಕಾರ ರೈತರು, ಕಾರ್ಮಿಕರು, ಸಾರ್ವಜನಿಕರನ್ನು ಅದೋಗತಿಗೆ ತಳ್ಳಲು ಮುಂದಾಗಿದೆ ವಿದ್ಯುತ್ ಖಾಸಗೀಕರಣ ಕೈಬಿಡಬೇಕು ಇಲ್ಲವಾದಲ್ಲಿ ರಾಜ್ಯಾದ್ಯಂತ ತೀವ್ರ ಪ್ರತಿಭಟನೆ ನಡೆಸುವುದಾಗಿ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮಲ್ಲಿಕಾರ್ಜುನ ಸತ್ಯಂಪೇಟೆ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಹೊರವಲಯದಲ್ಲಿರುವ ಜೆಸ್ಕಾಂ ಉಪ ವಿಭಾಗದ ಕಾರ್ಯಪಾಲಕ ಅಭಿಯಂತರರ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಮಾತನಾಡಿದ ಮಲ್ಲಿಕಾರ್ಜುನ ಸತ್ಯಂಪೇಟೆ, ಖಾಸಗಿಕರಣದಿಂದ ಮೊಬೈಲ್ ಗಳಂತೆ ರಿಚಾರ್ಜ್ ಮಾಡಿಕೊಳ್ಳುವ ಪದ್ಧತಿ ಜಾರಿ ಮಾಡುತ್ತಿದ್ದು ಇದರಿಂದ ರೈತರು ಸಮಸ್ಯೆ ಅನುಭವಿಸಲಿದ್ದಾರೆ. ರೈತರನ್ನು ಸರ್ವನಾಶ ಮಾಡಲು ಸರ್ಕಾರಗಳು ಮುಂದಾಗುತ್ತಿದ್ದು ಕೂಡಲೇ ಇದನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.
ರೈತರಿಗೆ ನಿರಂತರ ಏಳು ತಾಸುಗಳ ವಿದ್ಯುತ್ ನೀಡಬೇಕು. ಬೆಸ್ಕಾಂ ಇಲಾಖೆಯ ಶಾಂತಪ್ಪ ಎನ್ನುವ ಜೆ.ಇ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಕೂಡಲೇ ಅವನನ್ನು ಬೇರೆ ಕಡೆಗೆ ವರ್ಗಾಯಿಸಬೇಕು. ರೈತರ ಜಮೀನುಗಳಿಗೆ ವಿದ್ಯುತ್ ಸರಿಯಾಗಿ ಸರಬರಾಜು ಆಗುತ್ತಿಲ್ಲ ವಿದ್ಯುತ್ ತಂತಿ ಅಳವಡಿಸುವ ಸಮಸ್ಯೆ ಬಗೆಹರಿಸಬೇಕು. ಯಮನೂರು ಭಾಗದ ಹೊಸ ಲೈನ್ ಆರಂಭಿಸಬೇಕು. ಕಕ್ಕೇರಾದಲ್ಲಿ ಮನೆಗಳ ಮೇಲೆ ವಿದ್ಯುತ್ ತಂತಿ ಇದ್ದು ಬೇರೆ ಕಡೆಗೆ ಸ್ಥಳಾಂತರಿಸಬೇಕು. ಅನೇಕ ಕಡೆ ಲೈನ್ ಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ ಅಂತವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಹಾಯಕ ಕಾರ್ಯನಿರ್ವಕ ಅಭಿಯಂತರ ಮೊಹಮ್ಮದ್ ರಫೀಕ್, ಪಿಎಸ್ಐ ಸಿದ್ದಣ್ಣ ಯಡ್ರಾಮಿ, ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುದ್ದಣ್ಣ ಅಮ್ಮಾಪುರ, ಕಾರ್ಯದರ್ಶಿ ಬುಚ್ಚಪ್ಪ ನಾಯಕ, ಮಲ್ಕಣ್ಣ ಚಿಂತಿ, ತಾಲೂಕ ಅಧ್ಯಕ್ಷ ಭೀಮಣ್ಣ ನಾಯಕ ಲಕ್ಷ್ಮೀಪುರ, ಬಸವರಾಜ ಕೊಡಗನೂರ, ಹಣಮಂತ ರುಕ್ಮಾಪುರ, ಮಲ್ಲಣ್ಣ ಮಡಿವಾಳ, ಹಣಮಂತರಾಯ ಬಿಶೆಟ್ಟಿ, ಚೆನ್ನಮಲ್ಲಿಕಾರ್ಜುನ ಗುಂಡಾನೂರ, ರಾಚಪ್ಪ ಅಮ್ಮಾಪುರ, ಶಿವಪ್ಪ ಎಮ್ಮೇರ, ಲಂಚಪ್ಪ ಪ್ಯಾಟಿ, ಮುನ್ನಾಸಾಬ್ ಅಮ್ಮಾಪುರ, ಮಲ್ಲಯ್ಯ ಗುತ್ತೇದಾರ, ನಿಂಗಯ್ಯ ಗುತ್ತೇದಾರ, ಬಸವರಾಜ ಕಮತಗಿ, ರೈತರು ಜೆಸ್ಕಾಂ ಇಲಾಖೆಯ ಸಿಬ್ಬಂದಿಗಳು ಭಾಗವಹಿಸಿದ್ದರು.






