ಯಾದಗಿರಿ| ಉಪ ಲೋಕಾಯುಕ್ತರಿಂದ ಸಾರ್ವಜನಿಕ ದೂರು ವಿಚಾರಣೆ, ಪ್ರಕರಣಗಳ ವಿಲೇವಾರಿ ಸಭೆ

ಯಾದಗಿರಿ: ಪ್ರತಿಯೊಬ್ಬರೂ ಗೌರವಯುತ ಜೀವನ ಹಾಗೂ ಆರೋಗ್ಯಕರ ರೀತಿಯಲ್ಲಿ ಬದುಕಲು ಸಂವಿಧಾನದಲ್ಲಿ ಅನುಕೂಲ ಮಾಡಿಕೊಳ್ಳಲಾಗಿದ್ದು, ಜಿಲ್ಲೆಯ ಅಧಿಕಾರಿಗಳು ಸಮನ್ವಯದೊಂದಿಗೆ ಕೆಲಸ ಮಾಡುವ ಮೂಲಕ ಜನರಿಗೆ ಉತ್ತಮ ಆಡಳಿತ ನೀಡಬೇಕೆಂದು ಕರ್ನಾಟಕದ ಉಪ ಲೋಕಾಯುಕ್ತರಾದ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ಅವರು ಹೇಳಿದರು.
ಮೇ.29ರ ಶುಕ್ರವಾರದಂದು ಯಾದಗಿರಿ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಸಾರ್ವಜನಿಕ ದೂರು ವಿಚಾರಣೆ ಹಾಗೂ ಪ್ರಕರಣಗಳ ವಿಲೇವಾರಿ ಸಭೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರವು ಆನೇಕ ಯೋಜನೆಗಳು, ಕಾರ್ಯಕ್ರಮಗಳನ್ನು ಜಾರಿಗೆ ತಂದಿವೆ. ಅವುಗಳನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಿಸಲು ಆಡಳಿತ ವರ್ಗವು ಪ್ರಮುಖ ಪಾತ್ರ ವಹಿಸುತ್ತದೆ. ಹಾಗಾಗಿ ಜಿಲ್ಲೆಯ ಸಮಸ್ತ ಅಧಿಕಾರಿಗಳು ಸಮನ್ವಯದೊಂದಿಗೆ ಕಾರ್ಯನಿರ್ವಹಿಸಬೇಕು. ಸರ್ಕಾರಿ ಕೆಲಸ ಕೇವಲ ಸಂಬಳಕ್ಕೆ ಮಾಡದೆ. ಇದು ನಮ್ಮ ಊರು ಎಂಬ ಮನೋಭಾವದಿಂದ ಕೆಲಸ ಮಾಡಿದಲ್ಲಿ ಗ್ರಾಮ, ಪಟ್ಟಣ ಹಾಗೂ ನಗರವು ಅಭಿವೃದ್ಧಿಯಾಗಲು ಸಹಾಯಕವಾಗುತ್ತದೆ ಎಂದರು.
ಕಾನೂನು ಪ್ರಕಾರ ಎಲ್ಲರೂ ಕೆಲಸ ಮಾಡಬೇಕು. ಯಾವುದೇ ಜಾತಿಯ ವ್ಯಾಮೋಹ ಬಿಡಬೇಕು. ಹೆಣ್ಣು ಮಕ್ಕಳನ್ನು ಗೌರವಯುತವಾಗಿ ನಡೆಸಿಕೊಳ್ಳಬೇಕು. ಹಿರಿಯರಿಗೆ ಸರಿಯಾಗಿ ಮಾಸಾಶನವನ್ನು ಸಮಯಕ್ಕೆ ಸರಿಯಾಗಿ ನೀಡಬೇಕು. ಭಾರತ ಸಂವಿಧಾನಕ್ಕೆ ನಾವು ಎಲ್ಲರೂ ಬದ್ಧತೆ ತೋರಿಸಬೇಕು. ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳಬಾರದು. ರೈತರಿಗೆ ಸಮಯಕ್ಕೆ ಸರಿಯಾಗಿ ಬಿತ್ತನೆ ಬೀಜ, ರಸಗೊಬ್ಬರಗಳನ್ನು ವಿತರಣೆ ಮಾಡಬೇಕು. ಕಂದಾಯ ಇಲಾಖೆಯಲ್ಲಿ ರೈತರ ಕೆಲಸ ಕಾರ್ಯಗಳನ್ನು ನಿಗದಿತ ಸಮಯದಲ್ಲಿ ಮಾಡಬೇಕು ಎಂದರು.
ಮಾಡಬೇಕಾದ ಕೆಲಸವನ್ನು ಸಮಯಕ್ಕೆ ಸರಿಯಾಗಿ ಮಾಡಬೇಕು. ಯಾವುದೇ ಒತ್ತಡಕ್ಕೆ ಒಳಗಾಗದೆ ಸ್ವತಂತ್ರವಾಗಿ ಕೆಲಸ ಮಾಡಬೇಕು. ದೇಶದಲ್ಲಿ ಕರ್ನಾಟಕ ರಾಜ್ಯವು ಭ್ರಷ್ಟಾಚಾರದಲ್ಲಿ ಐದನೆಯ ಸ್ಥಾನದಲ್ಲಿದೆ. ನಮ್ಮ ನಡತೆಯನ್ನು ಕಾಪಾಡುವ ಮೂಲಕ ನಾವು ಉತ್ತಮ ಜೀವನ ನಡೆಸಬೇಕು. ಭ್ರಷ್ಟಾಚಾರ ನಿರ್ಮೂಲನೆ ಮಾಡಿದಲ್ಲಿ ದೇಶ, ರಾಜ್ಯ ಸಾಕಷ್ಟು ಅಭಿವೃದ್ಧಿಯಾಗುತ್ತದೆ ಹಾಗೂ ಸಂವಿಧಾನದ ಆಶೋತ್ತರಗಳನ್ನು ನಾವೆಲ್ಲರೂ ಪಾಲಿಸಬೇಕು ಎಂದರು.
ಲೋಕಾಯುಕ್ತರ ಕಚೇರಿಗೆ ಬಡವರು, ದೀನ ದಲಿತರ ಪ್ರಕರಣಗಳು ಬರುತ್ತವೆ. ಉದ್ದೇಶ ಪೂರ್ವಕವಾಗಿ ಸರಕಾರಿ ಅಧಿಕಾರಿಗಳ ಮೇಲೆ ಪ್ರಕರಣ ದಾಖಲು ಮಾಡಿ, ಹಣ ವಸೂಲಿ ಮಾಡುವ ಕೆಲವು ವ್ಯಕ್ತಿಗಳು ಇದ್ದಾರೆ. ಇಂತಹ ವ್ಯಕ್ತಿಗಳಿಂದ ಅಧಿಕಾರಿಗಳು ಎಚ್ಚರ ವಹಿಸಬೇಕು. ಲೋಕಾಯುಕ್ತ ಕಾಯ್ದೆಯನ್ನು ಸರಿಯಾಗಿ ತಿಳಿದುಕೊಳ್ಳಬೇಕು. ಸಾರ್ವಜನಿಕರು, ಹಾಗೂ ಅಧಿಕಾರಿಗಳು ನಮ್ಮ ಇಲಾಖೆಯ ಬಗ್ಗೆ ಸರಿಯಾಗಿ ತಿಳಿದುಕೊಂಡಾಗ ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳಬಹುದಾಗಿದೆ ಎಂದರು.
ಕರ್ನಾಟಕ ಲೋಕಾಯುಕ್ತರ ವ್ಯಾಪ್ತಿಗೆ ಬರುವ ಪ್ರಕರಣಗಳನ್ನು ಮಾತ್ರ ವಿಚಾರಣೆ ಮಾಡಲಾಗುತ್ತದೆ. ಸಾರ್ವಜನಿಕರು ಶಾಂತ ಚಿಂತದಿಂದ ವರ್ತಿಸಬೇಕು. ಎಲ್ಲರೂ ಸಹ ಎರು ಧ್ವನಿಯಲ್ಲಿ ಮಾತನಾಡದೆ ಒಬ್ಬೊಬ್ಬರಾಗಿ ತಮ್ಮ ಪ್ರಕರಣಗಳ ಮಾಹಿತಿ ನೀಡಿ. ಜಿಲ್ಲಾಡಳಿತದಿಂದ ನಮಗೆ ಸಹಕಾರ ನೀಡಿದ್ದಾರೆ. ಜಿಲ್ಲಾಡಳಿತವು ಜಿಲ್ಲೆಯ ಪ್ರತಿಯೊಬ್ಬ ಅರ್ಹ ಫಲಾನುಭವಿಗಳಿಗೆ ಸೇವೆ ನೀಡುವ ಮೂಲಕ ಅವರಿಗೆ ನೆರವು ಆಗಬೇಕೆಂದರು.
ದೂರುಗಳು ಹೆಚ್ಚಿನ ರೀತಿಯಲ್ಲಿ ನಮಗೆ ಸಂದಾಯ ಆಗಿವೆ. ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಂಡು ಪರಿಹಾರವನ್ನು ನೀಡುವುದಕ್ಕೆ ಪ್ರಯತ್ನ ಮಾಡಲಾಗುತ್ತದೆ. ಭಾರತ ಸಂವಿಧಾನದಲ್ಲಿ ಅನುಚ್ಛೇದ 21ರ ಪ್ರಕಾರ ಎಲ್ಲರಿಗೂ ಸಮಪಾಲು, ಎಲ್ಲರಿಗೂ ಸಮಬಾಳು ನೀಡಿದೆ. ಎಲ್ಲರೂ ಗೌರವಯುತವಾದ, ಆರೋಗ್ಯಕರ ರೀತಿಯಲ್ಲಿ ಮತ್ತು ನಮ್ಮ ಇಚ್ಛೆಯಂತೆ ಜೀವನವನ್ನು ನಡೆಸಲು ಅವಕಾಶ ನೀಡಿದೆ. 14ವರ್ಷದೊಗಿನ ಮಕ್ಕಳಿಗೆ ಉಚಿತ ಹಾಗೂ ಕಡ್ಡಾಯವಾಗಿ ಶಿಕ್ಷಣ ನೀಡುವದಾಗಿದೆ ಎಂದರು.
ಮೂರು ವರ್ಷಗಳ ಹಿಂದೆ ಯಾದಗಿರಿ ಜಿಲ್ಲೆಗೆ ಬಂದಾಗ ಮೂರು ದಿನಗಳ ಕಾರ್ಯಕ್ರಮ ಮಾಡಲಾಗಿತ್ತು. ಮೊದಲ ದಿನ ಸಾರ್ವಜನಿಕ ಅರ್ಜಿ ಸ್ವೀಕಾರ. ಎರಡನೆಯ ದಿನ ಅರ್ಜಿಗಳ ವಿಲೇವಾರಿ ಮತ್ತು ಮೂರನೆ ದಿನ ಸಮಸ್ಯೆಗಳಿಗೆ ಪರಿಹಾರ ನೀಡಲಾಗಿತ್ತು. ಈ ಸಲ ಎರಡು ದಿನಗಳ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈಗಾಗಲೇ ಒಂದು ತಿಂಗಳ ಮುಂಚೆ ಎಲ್ಲಾ ಕೇಸುಗಳ ಮಾಹಿತಿಯನ್ನು ತಮಗೆ ನೀಡಲಾಗಿದ್ದು ಸಮಸ್ಯೆಗಳಿಗೆ ಪರಿಹಾರ ಮಾಡಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ರಾಹುಲ್ ತುಕಾರಾಂ ಪಾಂಡ್ವೆ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಲವೇಶ್ ಒರಡಿಯಾ, ಆಪ್ತ ಕಾರ್ಯದರ್ಶಿ ಕಿರಣ ಪಿ.ಎಮ್. ಪಾಟೀಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್, ಲೋಕಾಯುಕ್ತ ಪೊಲೀಸ್ ಜಿಲ್ಲಾ ವರಿಷ್ಠಾಧಿಕಾರಿ ಸಿದ್ದರಾಜು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮರಿಯಪ್ಪ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.






