ಯಾದಗಿರಿ | ರೇಣುಕಾಚಾರ್ಯರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು; ಶರಣಬಸಪ್ಪಗೌಡ ಕೋಟೆಪ್ಪಗೋಳ

ಯಾದಗಿರಿ : ಆದಿ ಜಗದ್ಗುರು ರೇಣುಕಾಚಾರ್ಯರ ತತ್ವಗಳು ವಿಶ್ವಕ್ಕೆ ಮಾದರಿಯಾಗಿದ್ದು, ಅವುಗಳನ್ನು ಅಳವಿಡಿಸಿಕೊಂಡು ಮುಂದೆ ಸಾಗುವ ಉದ್ದೇಶದಿಂದ ಸರ್ಕಾರ ಜಯಂತಿ ಆಚರಣೆ ಮಾಡುತ್ತಿದೆ ಎಂದು ಅಪರ ಜಿಲ್ಲಾಧಿಕಾರಿ ಶರಣಬಸಪ್ಪಗೌಡ ಕೊಟೆಪ್ಪಗೊಳ ಅಭಿಪ್ರಾಯಪಟ್ಟರು.
ನಗರದ ಕನ್ನಡ ಸಾಹಿತ್ಯ ಪರಿಷತ್ ಸಭಾಭವನದಲ್ಲಿ ಜಿಲ್ಲಾಡಳಿತ ವತಿಯಿಂದ ಆಯೋಜಿಸಿದ್ದ ಜಗದ್ಗುರು ರೇಣುಕಾಚಾರ್ಯರ ಜಯಂತಿ ಕಾರ್ಯಕ್ರಮದಲ್ಲಿ ರೇಣುಕಾಚಾರ್ಯರ ಭಾವಚಿತ್ರಕ್ಕೆ ಪೂಜೆ ಮಾಡಿ, ಜ್ಯೋತಿ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸರ್ಕಾರದಿಂದ ಸುಮಾರು 60ಕ್ಕೂ ಹೆಚ್ಚು ಮಹಾಪುರುಷರ ಧರ್ಮ ಸಂಸ್ಥಾಪಕರ ಜಯಂತಿ ಆಚರಿಸಲಾಗುತ್ತಿದೆ. ಎಲ್ಲಾ ಮಹಾಪುರುಷರ ಜಯಂತಿ ಆಚರಣೆ ಉದ್ದೇಶ ಅವರ ಸಂದೇಶಗಳನ್ನು ಅರಿತು ಅಳವಡಿಸಿಕೊಂಡು ಮುಂದೆ ಸಾಗಬೇಕು ಎಂಬುದೇ ಆಗಿದೆ ಎಂದು ತಿಳಿಹೇಳಿದರು.
ಜಗದ್ಗುರು ರೇಣುಕಾಚಾರ್ಯರ ಕುರಿತು ವಿಶೇಷ ಉಪನ್ಯಾಸ ನೀಡಿದ ಸರ್ಕಾರಿ ಪದವಿ ಮಹಾವಿದ್ಯಾಲಯ ಪ್ರಭಾರಿ ಪ್ರಾಚಾರ್ಯರಾದ ಡಾ.ಸುಭಾಶ್ಚಂದ್ರ ಕೌಲಗಿ , ರೇಣುಕಾಚಾರ್ಯರು ಜಗದ ಆದಿ ಜಗದ್ಗುರುಗಳಾಗಿದ್ದಾರೆ. ಇವರು ಬೋಧಿಸಿದ ತತ್ವಗಳು ವಿಶ್ವಕ್ಕೆ ಮಾದರಿಯಾಗಿವೆ ಎಂದರು.
ವೇದಿಕೆ ಮೇಲೆ ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಚೆನ್ನಪ್ಪಗೌಡ ಮೋಸಂಬಿ, ವೀರಶೈವ ನೌಕರರ ಸಂಘದ ರಾಯಪ್ಪಗೌಡ ಹುಡೆದ ಜಿಲ್ಲಾಧ್ಯಕ್ಷರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಶ್ರೀಮತಿ ಉತ್ತರಾದೇವಿ ಮಠಪತಿ ಇದ್ದರು.
ಸಮಾರಂಭದಲ್ಲಿ ವೀರಶೈವ ಮಹಾಸಭೆ ಮಾಜಿ ಅದ್ಯಕ್ಷ ಸೋಮಶೇಖರ ಮಣ್ಣೂರು ಜಂಗಮಂಬೇಡ ಜಂಗಮ ಸಮಾಜದ ಜಿಲ್ಲಾ ಕಾರ್ಯಾಧ್ಯಕ್ಷ ವೈಜನಾಥ ಹಿರೇಮಠ, ತಾಲ್ಲೂಕು ಅದ್ಯಕ್ಷ ಚೆನ್ನವೀರಯ್ಯ ಕೌಳೂರು, ಸೇರಿದಂತೆ ಸಮಾಜದ ಮುಖಂಡರು ಪಾಲ್ಗೊಂಡರು.