ಯಾದಗಿರಿ | ಸೇವಾಲಾಲ್ ಜಯಂತಿಯನ್ನು ಆಚರಿಸದೆ ಅಗೌರವ ತೋರಿದ ಸಿಬ್ಬಂದಿಗಳ ಅಮಾನತ್ತಿಗಾಗಿ ಮನವಿ

ಕೆಂಭಾವಿ : ಸಂತ ಸೇವಾಲಾಲ ಜಯಂತಿ ಆಚರಣೆ ಮಾಡದೆ ನಿರ್ಲಕ್ಷ್ಯವಹಿಸಿದ ಸಿಬ್ಬಂದಿಗಳ ಮೇಲೆ ಶಿಸ್ತು ಕ್ರಮ ಜರುಗಿಸಿ ಅಮಾನತ್ತು ಮಾಡುವಂತೆ ಕೃಭಾಜನಿನಿ ಅಧಿಕಾರಿಗೆ ಭಾರತಿಯ ಬಂಜಾರ ಸಂಘಟನಾ ಸಮಿತಿಯ ವತಿಯಿಂದ ಮನವಿಯನ್ನು ಸಲ್ಲಿಸಲಾಯಿತು.
ಮನವಿಯನ್ನು ನೀಡಿ ಮಾತನಾಡಿದ ಭಾರತಿಯ ಬಂಜಾರ ಸಂಘಟನಾ ಸಮಿತಿಯ ಯಾದಗಿರಿ ಜಿಲ್ಲಾಧ್ಯಕ್ಷ ಅಶೋಕ ಜಾಧವ ಅವರು, ಸಂತ ಸೇವಾಲಾಲರು ಸಮಸ್ತ ಬಂಜಾರ ಸಮುದಾಯದ ಆರಾಧ್ಯ ಚಾರಿತ್ರಿಕ ಪುರುಷನಾಗಿದ್ದು, ಇನ್ನೂ ಪ್ರತಿವರ್ಷವೂ ಸೇವಾಲಾಲರ ಜಯಂತಿಯನ್ನು ಸರ್ಕಾರಿ ಎಲ್ಲಾ ಕಚೇರಿಗಳಲ್ಲಿ ಆಚರಿಸಬೇಕೇಂದು ಜಿಲ್ಲಾಡಳಿತ ಹಾಗೂ ಸರಕಾರದ ಆದೇಶವಿದ್ದರೂ, ಪಟ್ಟಣದ ಮಾನ್ಯ ಸಹಾಯಕ ಕಾರ್ಯಪಾಲಕ ಅಭಿಯಂತರರು ಕೃ.ಭಾ.ಜ.ನಿ.ನಿ ಐಬಿಸಿ ಉಪವಿಭಾಗ -2 ಕಚೇರಿಯ ಎಸ್.ಡಿ.ಸಿ. ಸಿದ್ದಣ್ಣ ಕಟ್ಟಿಮನಿ ಮತ್ತು ಸಿಬ್ಬಂದಿಗಳು ಜಯಂತಿಯನ್ನು ಆಚರಣೆ ಮಾಡದೆ ವಿಳಂಬ ನೀತಿಯನ್ನು ಪ್ರದರ್ಶಿಸಿದ್ದು, ಈ ಘಟನೆಯಿಂದ ಬಂಜಾರ ಸಮುದಾಯದ ಕೋಟ್ಯಾಂತರ ಜನತೆಯ ಭಾವನೆಗಳಿಗೆ ದಕ್ಕೆಯುಂಟಾಗಿದ್ದು, ಸಮುದಾಯಕ್ಕೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಇಲಾಖೆಯ ಅಧಿಕಾರಿಗಳು ಮುಂದಾಗುಹುದರ ಜೊತೆಗೆ ನಿರ್ಲಕ್ಷವಹಿಸಿದ ಸಿಬ್ಬಂದಿಗಳ ಮೇಲೆ ಸೂಕ್ತ ಕ್ರಮ ಜರುಗಿಸಿ ಅಮಾನತ್ತು ಮಾಡಬೇಕು ಎಂದು ಆಗ್ರಹಿಸಿದರು.
ಸಮಾಜದ ಮುಖಂಡ ಚಂದು ಜಾಧವ ಮಾತನಾಡಿ, ಮಹಾನ ಪುರುಷನ ಜಯಂತಿಯನ್ನು ಆಚರಿಸದೆ ವಿಳಂಬ ಮಾಡಿದ ಎಸ್.ಡಿಸಿ ಸಿದ್ದಣ್ಣ ಕಟ್ಟಿಮನಿ ಮತ್ತು ಸಿಬ್ಬಂದಿಗಳ ಮೇಲೆ ಇಲಾಖೆಯ ಅಧಿಕಾರಿಗಳು ಸೂಕ್ತ ಕ್ರಮ ವಹಿಸಿ ಪಾಠವನ್ನು ಕಲಿಸಬೇಕು ಇಲ್ಲವಾದಲ್ಲಿ ಬಂಜಾರ ಸಮುದಾಯದ ಜನತೆಯ ಭಾವನೆಗಳಿಗೆ ದಕ್ಕೆಯನ್ನುಂಟು ಮಾಡಿದ ಅಧಿಕಾರಿಗಳ ಅಮಾನತ್ತು ಮಾಡುವವರೆಗು ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು.







