ಯಾದಗಿರಿ | ಖಾಸಗಿ ವೈದ್ಯರ ತಪಾಸಣೆ ದರ ನಿಗದಿ ಪಡಿಸಲು ಟಿಹೆಚ್ಒಗೆ ಮನವಿ
ಯಾದಗಿರಿ/ ಸುರಪುರ : ತಾಲೂಕಿನಲ್ಲಿನ ಖಾಸಗಿ ವೈದ್ಯರು ರೋಗಿಗಳ ತಪಾಸಣೆ ದರವನ್ನು ಸರಕಾರ ನಿಗದಿ ಪಡಿಸಿದಂತೆ ತೆಗೆದುಕೊಳ್ಳಲು ಖಾಸಗಿ ಕ್ಲಿನಿಕ್ ಹಾಗೂ ನರ್ಸಿಂಗ್ ಹೋಂ ಗಳಿಗೆ ಸೂಚನೆ ನೀಡುವಂತೆ ಆಗ್ರಹಿಸಿ ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ವಿರೋಧಿ ಸಂಸ್ಥೆ-ದೆಹಲಿ ತಾಲೂಕು ಘಟಕದ ಮುಖಂಡರು ಒತ್ತಾಯಿಸಿದರು.
ನಗರದ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿಯಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ.ಆರ್.ವಿ ನಾಯಕಗೆ ಮನವಿ ಸಲ್ಲಿಸಿ ಮಾತನಾಡಿ, ಖಾಸಗಿ ಆಸ್ಪತ್ರೆಗಳಲ್ಲಿ ವೈದ್ಯರು ಮನಸ್ಸಿಗೆ ಬಂದಷ್ಟು ದರ ಪಡೆಯುತ್ತಿದ್ದು, ಇದರಿಂದ ಬಡ ರೋಗಿಗಳಿಗೆ ತುಂಬಾ ತೊಂದರೆಯಾಗುತ್ತಿದೆ. ಅಲ್ಲದೆ ವೈದ್ಯರು ಅನಗತ್ಯವಾಗಿ ಲ್ಯಾಬ್ ಟೆಸ್ಟ್ ಗಳನ್ನು ಬರೆಯುವುದಕ್ಕೂ ಕಡಿವಾಣ ಹಾಕುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಮನವಿ ಸ್ವೀಕರಿಸಿದ ಟಿಹೆಚ್ಓ ಡಾ.ಆರ್.ವಿ ನಾಯಕ, ತಾವು ಮನವಿ ಸಲ್ಲಿಸಿದಂತೆ ಎಲ್ಲಾ ಖಾಸಗಿ ವೈದ್ಯರಿಗೂ ಸರಕಾರ ನಿಗದಿಪಡಿಸಿದ ದರ ತೆಗೆದುಕೊಳ್ಳುವಂತೆ ಎಚ್ಚರಿಕೆ ನೀಡಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ರಾಜ್ಯ ಕಾರ್ಮಿಕ ವಿಭಾಗದ ಕಾರ್ಯದರ್ಶಿ ಶಿವರಾಜ ನಾಯಕ, ತಾಲೂಕು ಅಧ್ಯಕ್ಷ ಹೊನ್ನಪ್ಪ ತಳವಾರ, ಕಾರ್ಯದರ್ಶಿ ಸಚಿನಕುಮಾರ ನಾಯಕ ಸೇರಿದಂತೆ ಅನೇಕರಿದ್ದರು.