Yadagiri | ಸುರಕ್ಷಿತ ರಕ್ತದಾನದಿಂದ ಜೀವ ಉಳಿಸಬಹುದು: ಡಾ.ಸಂಜೀವಕುಮಾರ
ರಾಷ್ಟ್ರೀಯ ಸ್ವಯಂಪ್ರೇರಿತ ರಕ್ತದಾನ ದಿನಾಚರಣೆ ಕಾರ್ಯಕ್ರಮ

ಯಾದಗಿರಿ: ಸುರಕ್ಷಿತ ರಕ್ತದಾನವು ಎಲ್ಲಾ ವಯಸ್ಸಿನ ಜನರ ಜೀವಗಳನ್ನು ಉಳಿಸಲು ಸಹಕಾರಿಯಾಗುತ್ತದೆ ಎಂದು ಯಾದಗಿರಿ ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಹಾಗೂ ಏಡ್ಸ್ ನಿಯಂತ್ರಣಾಧಿಕಾರಿ ಡಾ. ಸಂಜೀವಕುಮಾರ ರಾಯಚೂರಕರ್ ಹೇಳಿದರು.
ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಏಡ್ಸ್ ನಿಯಂತ್ರಣ ಘಟಕದ ಸಹಯೋಗದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಸಭಾಂಗಣದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಸ್ವಯಂಪ್ರೇರಿತ ರಕ್ತದಾನ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬರ ಜೀವನದಲ್ಲಿ ರಕ್ತದ ಅಗತ್ಯತೆ ಹಾಗೂ ರಕ್ತದಾನದ ಪ್ರಾಮುಖ್ಯತೆ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿವರ್ಷ ಅ.1ರಂದು ರಾಷ್ಟ್ರೀಯ ಸ್ವಯಂಪ್ರೇರಿತ ರಕ್ತದಾನ ದಿನವನ್ನು ಆಚರಿಸಲಾಗುತ್ತದೆ. ರಕ್ತದಾನಿಗಳಿಗೆ ನಿರ್ದಿಷ್ಟ ಮಾನದಂಡಗಳಿದ್ದು, ಅವುಗಳನ್ನು ಅನುಸರಿಸುವುದು ಅಗತ್ಯವಾಗಿದೆ ಎಂದು ಹೇಳಿದರು.
ದಾನಿಯ ವಯಸ್ಸು 18ರಿಂದ 60 ವರ್ಷಗಳ ನಡುವೆ ಇರಬೇಕು. ತೂಕ ಕನಿಷ್ಠ 45 ಕೆ.ಜಿ. ಅಥವಾ ಅದಕ್ಕಿಂತ ಹೆಚ್ಚಿರಬೇಕು. ನಾಡಿಮಿಡಿತ ನಿಮಿಷಕ್ಕೆ 60ರಿಂದ 100ರ ನಡುವೆ ಇರಬೇಕು. ರಕ್ತದೊತ್ತಡ ಸಾಮಾನ್ಯ ಮಟ್ಟದಲ್ಲಿರಬೇಕು. ಹಿಮೋಗ್ಲೋಬಿನ್ 12.5 ಗ್ರಾಂ/100 ಎಂಎಲ್‌ಗಿಂತ ಕಡಿಮೆಯಿರಬಾರದು. ದೇಹದ ಉಷ್ಣಾಂಶ 37.5 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಿರಬಾರದು ಎಂದು ತಿಳಿಸಿದರು.
ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ. ಮುಬಾಶೀರ್ ಅಹ್ಮದ್ ಸಾಜಿದ್ ಮಾತನಾಡಿ, ಸ್ವಯಂಪ್ರೇರಿತ ರಕ್ತದಾನ ಆಂದೋಲನದ ಕುರಿತು ಇರುವ ಅಪಕಲ್ಪನೆಗಳನ್ನು ಹೋಗಲಾಡಿಸಲು ವಿವಿಧ ಸಂಘ-ಸಂಸ್ಥೆಗಳು, ವಿದ್ಯಾರ್ಥಿಗಳು ಹಾಗೂ ಯುವಕರು ತಮ್ಮ ಸಮಯ ಹಾಗೂ ಸಂಪನ್ಮೂಲಗಳನ್ನು ಬಳಸುತ್ತಿರುವುದು ಶ್ಲಾಘನೀಯ ಎಂದರು.
ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ಜ್ಯೋತಿ ಕಟ್ಟಿಮನಿ ಮಾತನಾಡಿ, ಸುರಕ್ಷಿತ ಹಾಗೂ ಕಾನೂನುಬದ್ಧ ವೈದ್ಯಕೀಯ ನೆರವು ಪಡೆಯುವುದು ಪ್ರತಿಯೊಬ್ಬರ ಹಕ್ಕಾಗಿದೆ ಎಂದು ತಿಳಿಸಿದರು.
ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಲಕ್ಷ್ಮೀ ಮುಂಡಾಸ ಮಾತನಾಡಿ, ದೇಹದ ಪ್ರಮುಖ ಅಂಗಾಂಶಗಳಿಗೆ ಪೋಷಣೆ ನೀಡುವ ರಕ್ತವನ್ನು ದಾನ ಮಾಡುವ ಮೂಲಕ ಸಮಾಜದಲ್ಲಿ ಧನಾತ್ಮಕ ಬದಲಾವಣೆ ತರಬಹುದು ಎಂದರು.
ಕಚೇರಿ ಅಧೀಕ್ಷಕ ಸಾಹೇಬಗೌಡ ಮಾನೇಗಾರ ಮಾತನಾಡಿ, ಆಧುನಿಕ ವೈದ್ಯಕೀಯ ವ್ಯವಸ್ಥೆಯಲ್ಲಿ ರಕ್ತದಾನವು ಮಾನವೀಯತೆಯ ಪ್ರಮುಖ ಭಾಗವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ರಕ್ತದಾನ ಮಾಡಿದ ದಾನಿಗಳಾದ ಡಾ. ಎಂ.ಎ. ಸಾಜಿದ್ (ಡಿಎಂಒ), ಡಾ. ಸುನೀತಾ ನಿನ್ಶೆಕರ್, ಮಲ್ಲಿಕಾರ್ಜುನ ಹಾಗೂ ಬಾಗಪ್ಪ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಜಗನ್ನಾಥ ಕೋಟಿ, ಗಿರೀಶ್, ಮಲ್ಲೇಶಪ್ಪ, ಜ್ಯೋತಿ ಹವ್ವಳ, ಅರ್ಚನಾ, ಸಾಬಣ್ಣ, ಶ್ರೀಹರಿ ಪ್ಯಾರಾಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು ಸೇರಿದಂತೆ ಆರೋಗ್ಯ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ತುಳಸಿರಾಮ ಚವ್ಹಾಣ ನಿರೂಪಿಸಿದರು. ಬಾಬುರಾವ್ ತಳವಾರ ಸ್ವಾಗತಿಸಿದರು. ಅಂಬರೀಶ್ ವಿಭೂತಿ ವಂದನಾರ್ಪಣೆ ನೆರವೇರಿಸಿದರು.






